Asianet Suvarna News Asianet Suvarna News

ನಿವೃತ್ತ ಸರ್ಕಾರಿ ನೌಕರರಿಗೆ ಬಂಪರ್‌ ಪಿಂಚಣಿ

ಆರನೇ ರಾಜ್ಯ ವೇತನ ಆಯೋಗ ನೀಡಿದ ಶಿಫಾರಸಿನ ಅನ್ವಯ ನಿವೃತ್ತಿ ವೇತನ ಸೌಲಭ್ಯಗಳ ಪರಿಷ್ಕರಣೆ ಕುರಿತಂತೆ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

Good News For Retired Govt Employees

ಬೆಂಗಳೂರು : ಆರನೇ ರಾಜ್ಯ ವೇತನ ಆಯೋಗ ನೀಡಿದ ಶಿಫಾರಸಿನ ಅನ್ವಯ ನಿವೃತ್ತಿ ವೇತನ ಸೌಲಭ್ಯಗಳ ಪರಿಷ್ಕರಣೆ ಕುರಿತಂತೆ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ಸರ್ಕಾರ ಇತ್ತೀಚೆಗೆ ಈಗಾಗಲೇ ಸೇವೆಯಲ್ಲಿರುವ ನೌಕರರ ವೇತನ ಪರಿಷ್ಕರಣೆ, ಭತ್ಯೆ ಮುಂತಾದ ಸೌಲಭ್ಯಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಬುಧವಾರ ನಿವೃತ್ತಿ ವೇತನ ಸೌಲಭ್ಯ ಪರಿಷ್ಕರಣೆ ಆದೇಶ ಹೊರಡಿಸಿದ್ದು, ಅದರಂತೆ ವಯೋ ನಿವೃತ್ತಿ ವೇತನ, ವಿಶ್ರಾಂತಿ ನಿವೃತ್ತಿ ವೇತನ, ಅಶಕ್ತತಾ ನಿವೃತ್ತಿ ವೇತನ, ಪರಿಹಾರ ನಿವೃತ್ತಿ ವೇತನ ಮತ್ತು ಅನುಕಂಪ ಭತ್ಯೆಗಳ ಮಾಹೆಯಾನ ವೇತನ ಕನಿಷ್ಠ 8,500 ರು.ಗಳಿಗೆ ಹಾಗೂ ಗರಿಷ್ಠ ಮೊತ್ತ 75,300 ರು.ಗಳಿಗೆ ಹೆಚ್ಚಿಸಲಾಗಿದೆ. ಅದೇ ರೀತಿ ತಾತ್ಪೂರ್ತಿಕ (ಅಡ್‌ಹಾಕ್‌) ನಿವೃತ್ತಿ ವೇತನ ಪ್ರಮಾಣವು ಅತ್ಯಂತ ಅಸಾಧಾರಣ ಸಂದರ್ಭಗಳನ್ನು ಹೊರತು ಪಡಿಸಿ ಮಾಹೆಯಾನ 8,500 ರು.ಗಳಿಗೆ ಮೀರಬಾರದು.

ಸರ್ಕಾರಿ ನೌಕರರ ಪ್ರಕರಣಗಳಲ್ಲಿ ಅಳವಡಿಸಿಕೊಳ್ಳಲಾಗುವ ತುಟ್ಟಿಭತ್ಯೆಯ ಶೇಕಡವಾರು ಪ್ರಮಾಣವನ್ನೇ ಕುಟುಂಬ ಪಿಂಚಣಿದಾರರಿಗೂ ಸೇರಿದಂತೆ ನಿವೃತ್ತಿ ವೇತನದಾರರಿಗೂ ಮುಂದುವರೆಸಿ ಮಂಜೂರು ಮಾಡಲಾಗುತ್ತದೆ.

ನಿವೃತ್ತಿಯ ಉಪದಾನ (ಗ್ರಾಚುಟಿ) /ಮರಣ ಉಪದಾನ (ಗ್ರಾಚುಟಿ)

ನಿವೃತ್ತಿ ಗ್ರಾಚುಟಿ ಮೊತ್ತ 1-4-2018ರಂದು ಅಥವಾ ತದನಂತರ ನಿವೃತ್ತರಾಗುವ ಸರ್ಕಾರಿ ನೌಕರರಿಗೆ ಗರಿಷ್ಠ ಮಿತಿ 20 ಲಕ್ಷ ರು. ಆಗಿರಲಿದೆ. 1-4-2018ರಂದು ಅಥವಾ ತದನಂತರ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಸರ್ಕಾರಿ ನೌಕರನ ಸಂದರ್ಭದಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮದ ಅಡಿ ಲಭ್ಯವಿರುವ ಮರಣ ಗ್ರಾಚುಟಿಯನ್ನು ನೀಡಿರುವ ರೀತಿ ಹೀಗಿದೆ- *ಒಂದು ವರ್ಷಕ್ಕಿಂತ ಕಡಿಮೆ ಸೇವೆ ಮಾಡಿದ ನೌಕರನಿಗೆ ಉಪಲಬ್ಧಿಗಳ ಎರಡರಷ್ಟುಉಪದಾನ ನೀಡಲಾಗುತ್ತದೆ * ಒಂದು ವರ್ಷಕ್ಕಿಂತ ಹೆಚ್ಚು ಐದು ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿರುವ ನೌಕರನಿಗೆ ಉಪಲಬ್ಧಿಗಳ ಆರರಷ್ಟುಉಪದಾನ ಸಿಗಲಿದೆ.* ಐದು ವರ್ಷಕ್ಕಿಂತ ಹೆಚ್ಚು ಆದರೆ 20 ವರ್ಷಗಿಂತ ಕಡಿಮೆ ಸೇವೆ ಸಲ್ಲಿಸಿರುವ ನೌಕರನಿಗೆ ಉಪಲಬ್ಧಿಗಳ 12ರಷ್ಟುಉಪದಾನ ಸಿಗಲಿದೆ.*20 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ನೌಕರನಿಗೆ ಉಪದಾನದ ಗರಿಷ್ಠ ಮೊತ್ತ ಉಪಲಬ್ಧಿಗಳ 33 ಹಾಗೂ ಮರಣ ಉಪದಾನವು ಯಾವುದೇ ಕಾರಣಕ್ಕೂ 20 ಲಕ್ಷ ರು.ಗಳಿಗೆ ಮೀರಬಾರದು.

ಕುಟುಂಬ ನಿವೃತ್ತಿ ವೇತನ:

ಸರ್ಕಾರಿ ನೌಕರನು 1-4-2018ರಂದು ಮತ್ತು ತದನಂತರ ಸೇವೆಯಲ್ಲಿರುವಾಗಲೇ ಮರಣ ಹೊಂದುವ, ನಿವೃತ್ತಿ ಹೊಂದುವ ಸರ್ಕಾರಿ ನೌಕರರಿಗೆ ಕುಟುಂಬ ನಿವೃತ್ತಿ ವೇತನ ಮಾಹೆಯಾನ ಕನಿಷ್ಠ 8,500 ಮತ್ತು ಗರಿಷ್ಠ 45,180 ರು.ಗಳ ಮಿತಿಗೆ ಒಳಪಟ್ಟಿರುತ್ತದೆ.

ತಂದೆ ತಾಯಿ ಇಬ್ಬರು ಸರ್ಕಾರಿ ನೌಕರರಾಗಿದ್ದು, 1-4-2018ರ ನಂತರ ಅಥವಾ ತದನಂತರ ಮೃತರಾದ ಪಕ್ಷದಲ್ಲಿ ಅಪ್ರಾಪ್ತ ಮಕ್ಕಳಿಗೆ ನೀಡುವ ಕುಟುಂಬ ಪಿಂಚಣಿ ಸಹ ಗರಿಷ್ಠ ಮಾಹೆಯಾನ 45,180 ರು.ಗಳಿಗೆ ಒಳಪಟ್ಟಿರುತ್ತದೆ.

ಇವರಿಗೆ ಅನ್ವಯವಿಲ್ಲ: ನಿವೃತ್ತಿ ವೇತನ ಕುರಿತಂತೆ ಹೊರಡಿಸಿರುವ ಆದೇಶ ಯುಜಿಸಿ, ಎಐಸಿಟಿ ಮತ್ತು ಐಸಿಎಆರ್‌ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿದ್ದು, ನಿವೃತ್ತರಾದ ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಎನ್‌ಜೆಪಿಸಿ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿದ್ದ ನಿವೃತ್ತ ನ್ಯಾಯಾಂಗ ಅಧಿಕಾರಿಗಳಿಗೆ ಅನ್ವಯವಾಗುವುದಿಲ್ಲ. ಈ ಕುರಿತು ಪ್ರತ್ಯೇಕ ಆದೇಶ ಹೊರಡಿಸಲಾಗುತ್ತದೆ.

Follow Us:
Download App:
  • android
  • ios