ಈ ಸರ್ಕಾರಿ ನೌಕರರಿಗಿದು ಶುಭ ಸುದ್ದಿ

Good News For 20 Thousand Employees
Highlights

ಅಧಿಕೃತ ಅಧಿಸೂಚನೆ ಹೊರಡಿಸಿರುವುದರಿಂದ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪಿನಿಂದ ಹಿಂಬಡ್ತಿ ಭೀತಿಗೊಳಗಾಗಿದ್ದ 20 ಸಾವಿರಕ್ಕೂ ಹೆಚ್ಚು ನೌಕರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. 

ಬೆಂಗಳೂರು :  ಪರಿಶಿಷ್ಟಜಾತಿ ಮತ್ತು ಪಂಗಡದ ನೌಕರರು, ಅಧಿಕಾರಿಗಳ ಬಡ್ತಿ ಮೀಸಲಾತಿ ರಕ್ಷಣೆ ಕುರಿತು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಇದೀಗ ಬಡ್ತಿ ಮೀಸಲಾತಿ ನೀಡುವುದು ಅಬಾಧಿತವಾದಂತಾಗಿದೆ.

ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರವು ಉಭಯ ಸದನದಲ್ಲಿ ಅಂಗೀಕರಿಸಿದ್ದ ಎಸ್‌ಸಿ/ಎಸ್‌ಟಿ ನೌಕರರು ಮತ್ತು ಅಧಿಕಾರಿಗಳ ಬಡ್ತಿ ಮೀಸಲಾತಿ ವಿಧೇಯಕ-2017ಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅಂಕಿತ ಹಾಕಿದ ಬಳಿಕ ರಾಜ್ಯಪಾಲರ ಅನುಮೋದನೆಯೊಂದನೆ ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದೆ.

ಶನಿವಾರ ಅಧಿಕೃತ ಅಧಿಸೂಚನೆ ಹೊರಡಿಸಿರುವುದರಿಂದ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪಿನಿಂದ ಹಿಂಬಡ್ತಿ ಭೀತಿಗೊಳಗಾಗಿದ್ದ 20 ಸಾವಿರಕ್ಕೂ ಹೆಚ್ಚು ನೌಕರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಸುಪ್ರೀಂ ಕೋರ್ಟ್‌ ಆದೇಶದ ನಂತರ ಕೆಲ ಇಲಾಖೆಗಳಲ್ಲಿ ಪರಿಷ್ಕೃತ ಜ್ಯೇಷ್ಠತಾ ವರದಿ ಆಧಾರದ ಮೇಲೆ ಹಲವು ಸರ್ಕಾರಿ ನೌಕರರಿಗೆ ಹಿಂಬಡ್ತಿ ನೀಡಲಾಗಿತ್ತು. ಹೀಗೆ ಹಿಂಬಡ್ತಿ ಪಡೆದ ಸರ್ಕಾರಿ ನೌಕರರು ಮತ್ತೆ ನೈಜ ಹುದ್ದೆಗೆ ಹಿಂತಿರುಗಲಿದ್ದಾರೆ.

1978ರಿಂದ ಅನ್ವಯ:  ಸರ್ಕಾರ ಪ್ರತಿಯೊಂದು ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಸ್‌ಸಿ/ಎಸ್‌ಟಿ ನೌಕರರಿಗೆ ಪ್ರತಿನಿಧಿತ್ವ ಖಚಿತಪಡಿಸಲು 1978ರಿಂದ ಜಾತಿಯಲ್ಲಿನ ಮೀಸಲಾತಿ ನೀತಿಯ ಆಧಾರದಲ್ಲಿ ಬಡ್ತಿಹೊಂದಿದ ಸಿಬ್ಬಂದಿಗೆ ಬಡ್ತಿ ಮುಂದುವರಿಸಲು ಮತ್ತು ಬಿ.ಕೆ.ಪವಿತ್ರ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ತೀರ್ಪಿನಿಂದ ಸಿಬ್ಬಂದಿಯನ್ನು ರಕ್ಷಿಸಲು ಬಡ್ತಿ ಮೀಸಲಾತಿ ಸಂರಕ್ಷಣೆ ಅಧಿನಿಯಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಈ ನಿಯಮದಿಂದ 1978ರ ಏ.27ರ ಬಳಿಕ ನೀಡಿರುವ ಎಲ್ಲಾ ಬಡ್ತಿಗಳು ಮಾನ್ಯತೆ ಪಡೆದುಕೊಳ್ಳಲಿವೆ.

2002ರಲ್ಲಿ ರಾಜ್ಯ ಸರ್ಕಾರ ಹೊಸದಾಗಿ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೊಳಿಸಿದ ಪರಿಣಾಮ ಸೇವಾ ಹಿರಿತನದ ಮೇಲೆ ಬಡ್ತಿ ನೀಡದೆ ಮೀಸಲಾತಿ ಆಧಾರದ ಮೇಲೆ ನೀಡಲಾಗುತ್ತಿತ್ತು. ಹಿರಿಯ ಹುದ್ದೆಗಳೆಲ್ಲಾ ಮೀಸಲಾತಿ ಪಡೆಯುವವರಿಗೆ ಲಭ್ಯವಾಗುತ್ತಿತ್ತು. ಇತರೆ ವರ್ಗದವರಿಗೆ ಅನ್ಯಾಯವಾಗುತ್ತಿದೆ ಎಂದು ಬಿ.ಕೆ.ಪವಿತ್ರ ಮತ್ತು ಇತರರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ 2017ರ ಫೆಬ್ರವರಿಯಲ್ಲಿ ಸಾಮಾನ್ಯ ವರ್ಗದವರಿಗೆ ಆಗುತ್ತಿರುವ ಆನ್ಯಾಯವನ್ನು ಸರಿಪಡಿಸುವಂತೆ ನಿರ್ದೇಶನ ನೀಡಿ ಬಡ್ತಿ ಮೀಸಲಾತಿ ನಿಯಮ ರದ್ದುಗೊಳಿಸಿತ್ತು. ಮಾತ್ರವಲ್ಲ, ಪರಿಷ್ಕೃತ ಜ್ಯೇಷ್ಠತಾ ಪಟ್ಟಿಸಿದ್ಧಪಡಿಸಿ ಆದೇಶಿಸಿತ್ತು ಪರಿಣಾಮ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿದ್ದ ಎಸ್‌ಸಿ/ಎಸ್‌ಟಿ ನೌಕರರು, ಅಧಿಕಾರಿಗಳು ಹಿಂಬಡ್ತಿಯ ಭೀತಿಗೊಳಗಾಗಿದ್ದರು.

ತರುವಾಯ ರಾಜ್ಯ ಸರ್ಕಾರವು ಬಡ್ತಿ ಮೀಸಲಾತಿಯನ್ನು ಮುಂದುವರಿಸಲು ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಹೊಸ ವಿಧೇಯಕ ಮಂಡಿಸಿ ಉಭಯ ಸದನದಲ್ಲಿ ಅಂಗೀಕಾರ ಪಡೆದು ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಗಿತ್ತು. ರಾಷ್ಟ್ರಪತಿಗಳಿಂದ ಅಂಕಿತವಾಗಿ ರಾಜ್ಯಸರ್ಕಾರವು ಅಧಿಸೂಚನೆ ಪ್ರಕಟಿಸುವ ಮೂಲಕ ಹಿಂಬಡ್ತಿ ಭೀತಿಯಿಂದ ಎಸ್‌ಸಿ/ಎಸ್‌ಟಿ ನೌಕರರು, ಅಧಿಕಾರಿಗಳು ನಿರಾಳರಾದಂತಾಗಿದೆ.

loader