ವೃದ್ಧ ದಂಪತಿಯಿಂದ 1.7 ಕೆಜಿ ಚಿನ್ನ, 2 ಲಕ್ಷ ರು ದರೋಡೆ

First Published 15, Jan 2018, 8:17 AM IST
Gold And Money Theft
Highlights

ವೃದ್ಧ ದಂಪತಿ ತಮ್ಮ ಜೀವಮಾನದ ಉಳಿತಾಯದ ಹಣ ಹಾಗೂ ಚಿನ್ನವನ್ನು ಬ್ಯಾಂಕ್ ಲಾಕರ್‌ನಿಂದ ಮನೆಗೆ ಕೊಂಡೊಯ್ಯುವ ವೇಳೆ ಹೊಂಚು ಹಾಕುತ್ತಿದ್ದ ದುಷ್ಟರ ತಂಡವೊಂದು ಅದನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಘಟನೆ ಚಂದ್ರಾ ಲೇಔಟ್‌ನ ಇನ್‌ಕಮ್ ಟ್ಯಾಕ್ಸ್ ಬಡಾವಣೆಯಲ್ಲಿ ನಡೆದಿದೆ

ಬೆಂಗಳೂರು (ಜ.15): ವೃದ್ಧ ದಂಪತಿ ತಮ್ಮ ಜೀವಮಾನದ ಉಳಿತಾಯದ ಹಣ ಹಾಗೂ ಚಿನ್ನವನ್ನು ಬ್ಯಾಂಕ್ ಲಾಕರ್‌ನಿಂದ ಮನೆಗೆ ಕೊಂಡೊಯ್ಯುವ ವೇಳೆ ಹೊಂಚು ಹಾಕುತ್ತಿದ್ದ ದುಷ್ಟರ ತಂಡವೊಂದು ಅದನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಘಟನೆ ಚಂದ್ರಾ ಲೇಔಟ್‌ನ ಇನ್‌ಕಮ್ ಟ್ಯಾಕ್ಸ್ ಬಡಾವಣೆಯಲ್ಲಿ ನಡೆದಿದೆ. ಈ ಘಟನೆಯಿಂದಾಗಿ ಚಂದ್ರಾ ಲೇಔಟ್‌ನ ರಾಜಣ್ಣ ಹಾಗೂ ಸರೋಜಮ್ಮ ವೃದ್ದ ದಂಪತಿ ತಮ್ಮ ಜೀವಮಾನದ ಗಳಿಕೆಯಾದ ಸುಮಾರು 53 ಲಕ್ಷ ರು. ಮೌಲ್ಯದ 1.695 ಕೆ.ಜಿ. ಚಿನ್ನ ಹಾಗೂ 2 ಲಕ್ಷ ರು. ಕಳೆದುಕೊಂಡಿದ್ದಾರೆ. ಘಟನೆ ಜನವರಿ ೮ರಂದು ಕೃತ್ಯ ನಡೆದಿದ್ದು, ಈ ಸಂಬಂಧ ಸರೋಜಮ್ಮ (55) ಅವರು ಚಂದ್ರಾ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೊದಲು ಗಮನ ಬೇರೆಡೆ ಸೆಳೆದು ದುಷ್ಕರ್ಮಿಗಳು ಚಿನ್ನಾಭರಣ ಮತ್ತು ಹಣವಿದ್ದ ಬ್ಯಾಗ್ ಲಪಟಾಯಿಸಲು ಯತ್ನಿಸಿದೆ. ಅದು ಸಾಧ್ಯವಾಗದಿದ್ದಾಗ ಕೈಯಲ್ಲಿದ್ದ ಬ್ಯಾಗನ್ನೇ ಕಸಿದು ಪರಾರಿಯಾಗಿದ್ದಾರೆ. ಮೇಲ್ನೋಟಕ್ಕೆ ತಮಿಳುನಾಡು ಮೂಲದ ಓಜಿಕುಪ್ಪಂ ಗ್ಯಾಂಗ್ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಟೈಯರ್ ಪಂಕ್ಚರ್: ರಾಜಣ್ಣ ಅವರು ಲೋಕೋಪಯೋಗಿ ಇಲಾಖೆಯ ನಿವೃತ್ತ ಎಂಜಿನಿಯರ್ ಆಗಿದ್ದು, ಇವರ ಕುಟುಂಬ ಚಂದ್ರಾ ಲೇಔಟ್‌ನ ಇನ್‌ಕಮ್ ಟ್ಯಾಕ್ಸ್ ಬಡಾವಣೆಯಲ್ಲಿ ವಾಸವಿದೆ. ಮನೆಗೆ ಸುಮಾರು ಒಂದು ಕಿಲೋ ಮೀಟರ್ ಅಂತರದಲ್ಲಿರುವ ಚಂದ್ರಾ ಲೇಔಟ್‌ನ ಅಪೆಕ್ಸ್ ಬ್ಯಾಂಕ್‌ನ ಲಾಕರ್ ನಲ್ಲಿ ಚಿನ್ನಾಭರಣ ಮತ್ತು ಹಣ ಇಟ್ಟಿದ್ದರು. ಜ.8 ರಂದು ರಾಜಣ್ಣ ದಂಪತಿ ತಮ್ಮ ಇಂಡಿಕಾ ಕಾರಿನಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಅಪೆಕ್ಸ್ ಬ್ಯಾಂಕ್‌ಗೆ ತೆರಳಿದ್ದರು. ಈ ವೇಳೆ ದುಷ್ಕರ್ಮಿಗಳು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ರಾಜಣ್ಣ ಅವರ ಕಾರಿನ ಟೈಯರ್ ಪಂಕ್ಚರ್ ಮಾಡಿದ್ದರು.

ರಾಜಣ್ಣ ಮತ್ತು ಸರೋಜಮ್ಮ ಅವರು ಬ್ಯಾಂಕ್‌ನ ಲಾಕರ್‌ನಲ್ಲಿಟ್ಟಿದ್ದ  ಚಿನ್ನಾಭರಣ ಹಾಗೂ ಹಣ ತೆಗೆದು ಕೊಂಡು ಬಂದು ದಂಪತಿ ಕಾರು ಹತ್ತಿದ್ದರು. ಈ ವೇಳೆ ಬ್ಯಾಗ್ ರಾಜಣ್ಣ ಅವರ ಪತ್ನಿ ಸರೋಜಮ್ಮ ಅವರ ಬಳಿಯೇ ಇತ್ತು. ದಂಪತಿ ಬ್ಯಾಂಕ್‌ನಿಂದ ಸುಮಾರು 200 ಮೀಟರ್ ಕಾರಿನಲ್ಲಿ ಮುಂದೆ ಬಂದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಟೈಯರ್ ಪಂಕ್ಚರ್ ಆಗಿದೆ ಎಂದು ಹೇಳಿದ್ದರು. ಮನೆಗೆ ಹತ್ತಿರ ಇರುವ ಕಾರಣ ರಾಜಣ್ಣ ಅವರು ಕಾರನ್ನು ನಿಲ್ಲಿಸದೆ ಹೊರಟಿದ್ದರು. ಮನೆ ಬಳಿ ಕಾರು ನಿಲ್ಲಿಸಿದ್ದು, ಸರೋಜಮ್ಮ ಬ್ಯಾಗ್ ತೆಗೆದುಕೊಂಡು ಕಾಂಪೌಂಡ್ ಒಳಗೆ ಹೋಗುತ್ತಿದ್ದಾಗ ಹಿಂದೆಯೇ ಬಂದ ದುಷ್ಕರ್ಮಿ ಬ್ಯಾಗ್ ಕಸಿದು ಅಲ್ಲಿಯೇ ಕಾಯುತ್ತಾ ನಿಂತಿದ್ದ ಮತ್ತೊಬ್ಬ ದುಷ್ಕರ್ಮಿ ಜತೆ ಬೈಕ್‌ನಲ್ಲಿ ಹತ್ತಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.

ಪಲ್ಸರ್ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಸವಾರ ಹೆಲ್ಮೆಟ್ ಧರಿಸಿದ್ದರೆ, ಹಿಂಬದಿ ಸವಾರ ಟೋಪಿ ಧರಿಸಿದ್ದ ಎಂದು ದೂರುದಾರರು ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ ಬ್ಯಾಂಕ್ ಬಳಿ 3 ಬೈಕ್‌ನಲ್ಲಿ ಬಂದಿದ್ದ ಆರೇಳು ದುಷ್ಕರ್ಮಿಗಳು ರಾಜಣ್ಣ ದಂಪತಿ ಚಲನವನದ ಬಗ್ಗೆ ನಿಗಾ ಇಟ್ಟಿರುವುದು ಸಿಸಿಟೀವಿಯಲ್ಲಿ ಸೆರೆಯಾಗಿದೆ. ಸ್ಥಳೀಯ ಸಿಸಿಟೀವಿ ಗಳನ್ನು ಪರಿಶೀಲಿಸಲಾಗುತ್ತಿದ್ದು, ತಮಿಳುನಾಡಿನ ಓಜಿಕುಪ್ಪಂ ಗ್ಯಾಂಗ್ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಶೀಘ್ರ ಆರೋಪಿಗಳನ್ನು ಬಂಧಿಸ ಲಾಗುವುದೆಂದು ಪೊಲೀಸರು ಹೇಳಿದರು.

loader