ಸಚಿವ ಸಂಪುಟ ವಿಸ್ತರಣೆ ಮಾಡುವ ಮೂಲಕ ಇಬ್ಬರು ಸಚಿವರಿಗೆ ಕೋಕ್ ನೀಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಕಚೇರಿಯಿಂದಲೇ ಮಾಹಿತಿ ಹೊರಬಿದ್ದಿದೆ. 

ಪಣಜಿ : ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರು ಸದ್ಯ ಅನಾರೋಗ್ಯಕ್ಕೆ ಒಳಗಾಗಿದ್ದು ಇದೇ ಸಂದರ್ಭದಲ್ಲಿ ಗೋವಾ ಸಚಿವ ಸಂಪುಟವನ್ನು ಪುನಾರಚನೆ ಮಾಡಲಾಗಿದೆ. 

ಈ ವೇಳೆ ಮನೋಹರ್ ಪರ್ರಿಕರ್ ಸಂಪುಟದಿಂದ ಇಬ್ಬರು ಸಚಿವರನ್ನು ಕೈ ಬಿಡಲಾಗಿದೆ ಎಂದು ಗೋವಾ ಮುಖ್ಯಮಂತ್ರಿ ಕಚೇರಿ ಮಾಹಿತಿ ನೀಡಿದೆ. 

ಸಚಿವರಾದ ಫ್ರಾನ್ಸಿಸ್ ಡಿಸೋಜಾ ಮತ್ತು ಪಾಂಡುರಂಗ ಮಡಕೈಕರ್ ಅವರನ್ನು ಸಂಪುಟದಿಂದ ಕೈ ಬಿಡಲಾಗಿದೆ. 

ಇನ್ನು ಇಬ್ಬರಿಂದ ತೆರವಾದ ಸ್ಥಾನಕ್ಕೆ ನೀಲೇಶ್ ಕಬ್ರಾಲ್ ಮತ್ತು ಮಿಲಿಂದ್ ನಾಯ್ಕ್ ಅವರನ್ನು ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. 

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಭಾನುವಾರ ಗೋವಾ ಸಂಪುಟ ಪುನಾರಚನೆ ಬಗ್ಗೆ ಮಾಹಿತಿ ನೀಡಿದ್ದು, ಗೋವಾ ಮುಖ್ಯಮಂತ್ರಿಯಾಗಿ ಪರ್ರಿಕರ್ ಅವರು ಮುಂದುವರಿಯಲಿದ್ದಾರೆ ಎಂದು ಹೇಳಿದ್ದರು. 

ಸದ್ಯ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.