ಭಾರತೀಯ ಪ್ರವಾಸಿಗರರು ಕೊಳಕರು: ಗೋವಾ ಸಚಿವ

Goa cabinet Minister calls Domestic Tourists scum of the Earth
Highlights

ಗೋವಾಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರು ಈ ಭೂಮಿಯಲ್ಲೇ ಅತಿ ಕೊಳಕರು. ಇದಲ್ಲದೆ, ಉತ್ತರ ಭಾರತದ ಪ್ರವಾಸಿಗರು ಗೋವಾವನ್ನು ಇನ್ನೊಂದು ‘ಹರ್ಯಾಣ’ ಮಾಡಲು ಹೊರಟಿದ್ದಾರೆ ಎಂದು ಗೋವಾದ ಪ್ರಭಾವಿ ಸಚಿವ ವಿಜಯ್‌ ಸರದೇಸಾಯಿ ತಮ್ಮ ಸಡಿಲ ನಾಲಿಗೆ ಹರಿಬಿಟ್ಟಿದ್ದಾರೆ.

ಪಣಜಿ : ಗೋವಾಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರು ಈ ಭೂಮಿಯಲ್ಲೇ ಅತಿ ಕೊಳಕರು. ಇದಲ್ಲದೆ, ಉತ್ತರ ಭಾರತದ ಪ್ರವಾಸಿಗರು ಗೋವಾವನ್ನು ಇನ್ನೊಂದು ‘ಹರ್ಯಾಣ’ ಮಾಡಲು ಹೊರಟಿದ್ದಾರೆ ಎಂದು ಗೋವಾದ ಪ್ರಭಾವಿ ಸಚಿವ ವಿಜಯ್‌ ಸರದೇಸಾಯಿ ತಮ್ಮ ಸಡಿಲ ನಾಲಿಗೆ ಹರಿಬಿಟ್ಟಿದ್ದಾರೆ.

ಮನೋಹರ್‌ ಪರ್ರಿಕರ್‌ ನೇತೃತ್ವದ ಬಿಜೆಪಿ ಸರ್ಕಾರದ ಆಧಾರ ಸ್ತಂಭ ಎನ್ನಿಸಿಕೊಂಡಿರುವ ಗೋವಾ ಫಾರ್ವರ್ಡ್‌ ಪಾರ್ಟಿ ಮುಖಂಡರೂ ಆದ ಸರದೇಸಾಯಿ ಸಮಾರಂಭವೊಂದರಲ್ಲಿ ಮಾತನಾಡಿ, ‘ಗೋವಾ ಜನರು ಅತ್ಯಂತ ಶ್ರೇಷ್ಠರು. ಆದರೆ ಇದಕ್ಕೆ ತದ್ವಿರುದ್ಧವಾಗಿ ಭಾರತದ ಇತರ ರಾಜ್ಯಗಳ ಪ್ರವಾಸಿಗರು ಕೊಳಕರು. ನಿಮ್ಮ ಮುಖ್ಯಮಂತ್ರಿ (ಪರ್ರಿಕರ್‌) ಪ್ರವಾಸಿಗರು ಹೆಚ್ಚು ಬರಲಿ ಎಂದು ಹೇಳುತ್ತಿದ್ದಾರೆ. ಆದರೆ ನಮ್ಮಲ್ಲಿ ಬರುತ್ತಿರುವ ದೇಶಿ ಪ್ರವಾಸಿಗರು ಬೇಜವಾಬ್ದಾರಿ ವ್ಯಕ್ತಿಗಳು’ ಎಂದು ಆರೋಪಿಸಿದರು.

‘ನಮ್ಮ ಜನಸಂಖ್ಯೆಯ 6 ಪಟ್ಟು ಪ್ರವಾಸಿಗರು ಗೋವಾಕ್ಕೆ ಆಗಮಿಸುತ್ತಾರೆ. ಅವರೆಲ್ಲ ‘ಟಾಪ್‌-ಎಂಡ್‌’ ಪ್ರವಾಸಿಗರಲ್ಲ. ಭೂಮಿಯಲ್ಲೇ ಅತಿ ಕೊಳಕರು. ಬೇಜವಾಬ್ದಾರಿಯಿಂದ ಕೂಡಿದವರು. ಇವರನ್ನು ನಿಯಂತ್ರಿಸೋದು ಹೇಗೆ? ಆದರೆ ಇವರಿಗೆ ಗೋವನ್ನರನ್ನು ಹೋಲಿಸಿದರೆ ಗೋವಾದವರು ತಲಾದಾಯ, ಸಾಮಾಜಿಕ ಹಾಗೂ ರಾಜಕೀಯ ಪ್ರಜ್ಞೆ, ಆರೋಗ್ಯ ಹಾಗೂ ಇತರ ಮಾನದಂಡಗಳಲ್ಲಿ ತುಂಬಾ ಶ್ರೇಷ್ಠರು. ಹೀಗಾಗಿ ಇಲ್ಲಿ ಬರುವವರಿಗಿಂತ ನಾವು ಶ್ರೇಷ್ಠ’ ಎಂದು ಹೇಳಿಕೊಂಡರು.

ಅಲ್ಲದೆ, ‘ಉತ್ತರ ಭಾರತದ ಪ್ರವಾಸಿಗರು ಗೋವಾವನ್ನು ಇನ್ನೊಂದು ಹರ್ಯಾಣ ಮಾಡಲು ಹೊರಟಿದ್ದಾರೆ. ಇವರ ಮೇಲೆ ನಾವು ಅವಲಂಬಿತರಾಗಿದ್ದೇವೆ ಎಂಬ ಕಾರಣಕ್ಕೆ ಅವರು ಹೀಗೆ ಮಾಡುತ್ತಿದ್ದಾರೆ. ಅವರಿಗೆ ಗೋವಾದ ಬಗ್ಗೆ ಚಿಂತೆ ಇಲ್ಲ’ ಎಂದು ಸರದೇಸಾಯಿ ಆರೋಪಿಸಿದರು.

ಈ ವಿಷಯ ಭಾರೀ ವಿವಾದಕ್ಕೆ ಕಾರಣವಾಗುತ್ತಲೇ ಸ್ಪಷ್ಟನೆ ನೀಡಿರುವ ವಿಜಯ್‌, ಎಲ್ಲಾ ಪ್ರವಾಸಿಗರನ್ನೂ ನಾನು ಹಾಗೆ ಹೇಳಿಲ್ಲ. ಕೆಲ ಪ್ರವಾಸಿಗರ ಬಗ್ಗೆ ಮಾತ್ರವೇ ಇಂಥ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಕೆಲ ಸಮಯದ ಹಿಂದೆ ಪ್ರವಾಸಿಗನೊಬ್ಬ ಪ್ರಸಿದ್ಧ ತಾಣವೊಂದರ ಬಳಿ ಬಸ್ಸಿನ ಕಿಟಕಿಯಿಂದಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಇಂಥ ಘಟನೆಗಳಿಂದಾಗಿ ನಾನು ಇಂಥ ಹೇಳಿಕೆ ನೀಡಬೇಕಾಗಿ ಬಂತು ಎಂದು ಹೇಳಿದ್ದಾರೆ.

loader