ಗೋವಾದಲ್ಲಿ ಮತ್ತೊಮ್ಮೆ ಕನ್ನಡಿಗರ ಆಕ್ರಂದನ ಕೇಳಿ ಬಂದಿದೆ. ಇಲ್ಲಿನ ಬೈನಾದಲ್ಲಿನ 55 ಕನ್ನಡಿಗರ ಮನೆಗಳನ್ನು ಗೋವಾ ಸರ್ಕಾರ ಧ್ವಂಸಗೊಳಿಸಿದೆ. ಅರ್ಧ ಶತಮಾನದ ಆಸರೆ, ಭಾವನಾತ್ಮಕ ಸಂಬಂಧ, ದೇವರ ಮೂರ್ತಿಗಳು ಎಲ್ಲವನ್ನೂ ಜೆಸಿಬಿಗಳು ಗಂಟೆಯೊಳಗೆ ಮಣ್ಣು ಮಾಡಿವೆ.
ಗೋವಾದಲ್ಲಿ ಮತ್ತೊಮ್ಮೆ ಕನ್ನಡಿಗರ ಆಕ್ರಂದನ ಕೇಳಿ ಬಂದಿದೆ. ಇಲ್ಲಿನ ಬೈನಾದಲ್ಲಿನ 55 ಕನ್ನಡಿಗರ ಮನೆಗಳನ್ನು ಗೋವಾ ಸರ್ಕಾರ ಧ್ವಂಸಗೊಳಿಸಿದೆ. ಅರ್ಧ ಶತಮಾನದ ಆಸರೆ, ಭಾವನಾತ್ಮಕ ಸಂಬಂಧ, ದೇವರ ಮೂರ್ತಿಗಳು ಎಲ್ಲವನ್ನೂ ಜೆಸಿಬಿಗಳು ಗಂಟೆಯೊಳಗೆ ಮಣ್ಣು ಮಾಡಿವೆ.
ಈ ಮೂಲಕ ಮತ್ತೆ ಸುಮಾರು 200ರಷ್ಟು ಕನ್ನಡಿಗರ ಬದುಕುಬೀದಿಗೆ ಬಿದ್ದಿದೆ. ಮುನ್ನೂರಕ್ಕೂ ಹೆಚ್ಚು ಪೊಲೀಸರು, 15ರಷ್ಟು ಜೆಸಿಬಿಗಳು, ಸರ್ಕಾರಿ ಅಧಿಕಾರಿಗಳು ಮಂಗಳವಾರ ಸುರಿಯುತ್ತಿರುವ ಮಳೆಯ ನಡುವೆಯೇ ಬೆಳಗ್ಗೆ ಬೈನಾ ಬೀಚ್‌ನಲ್ಲಿ ಕನ್ನಡಿಗರು ಕಟ್ಟಿಕೊಂಡಿದ್ದ ಮನೆಗಳನ್ನು ಕೆಡವಿಹಾಕಿದರು.
ಈ ಮೂಲಕ ಬೈನಾದಲ್ಲಿ ಅಸಹಾಯಕ ಕನ್ನಡಿಗರ ಮೇಲಿನ ದೌರ್ಜನ್ಯವನ್ನು ಮುಂದುವರಿಸಿದರು. ಕೈಮುಗಿದರೂ, ಕಾಲಿಗೆರಗಿ ಪರಿಪರಿಯಾಗಿ ಬೇಡಿಕೊಂಡರೂ ಲೆಕ್ಕಿಸದ ಅಧಿಕಾರಿಗಳು ಜೆಸಿಬಿ ಮುಂದಿಟ್ಟುಕೊಂಡು 50 ವರ್ಷಗಳಿಂದ ಕಟ್ಟಿಕೊಂಡಿದ್ದ ಬದುಕನ್ನು ನೆಲಸಮ ಮಾಡಿದರು.
ಇದೊಂದು ಖಾಸಗಿ ಭೂಮಿ. ಈ ಖಾಸಗಿ ಭೂಮಿಯನ್ನು ಮಾಲೀಕರು ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ. ಹಾಗಾಗಿ ಕೆಡವಲೇಬೇಕು ಎಂದು ದಕ್ಷಿಣ ಗೋವಾ ಜಿಲ್ಲಾಧಿಕಾರಿ ಪಟ್ಟು ಹಿಡಿದಿದ್ದರು. ಈ ಬಗ್ಗೆ ನೋಟಿಸ್ ಕೂಡ ನೀಡಲಾಗಿತ್ತು. ಅದರಂತೆ ಸೋಮವಾರ ರಾತ್ರಿಯೇ ಪೊಲೀಸರು ಬೈನಾದಲ್ಲಿನ ಈ 55 ಮನೆಗಳನ್ನು ಸುತ್ತುವರಿದರು. ರಾತ್ರೋ ರಾತ್ರಿ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಿದರು.
ಮಳೀ ಸುರೀತೈತಿ, ಹಿರಿಯರು, ಹೆಂಡ್ತಿ, ಮಕ್ಕಳನ್ನು ಕಟ್ಟಿಕೊಂಡು ದಾರಿಲ್ಲಿ ಇದೀವ್ರೀ. ಈಗ ಎಲ್ಲಿ ಹೋಗಬೇಕ್ರಿ. ನಮಗ ಯಾರ ನೋಡತಾರ್ರಿ
-ಬಾಳಪ್ಪ ಗೋನಾಳ ಮನೆ, ಕಳೆದುಕೊಂಡ ನಿರಾಶ್ರಿತ
ಗೋವಾ ಸರ್ಕಾರ ಅಲ್ಲಿನ ಕನ್ನಡಿಗರನ್ನು ಒಕ್ಕಲೆಬ್ಬಿಸಲು ದೌರ್ಜನ್ಯ ಎಸಗಿರುವುದು ಖಂಡನೀಯ. ಕನ್ನಡಿಗರ ಹಿತ ಕಾಪಾಡಲು ರಾಜ್ಯ ಸರ್ಕಾರ ಬದ್ಧ. ರಾಜ್ಯ ಬಿಜೆಪಿ ನಾಯಕರು ಕನ್ನಡಿಗರ ಸಮಸ್ಯೆ ಪರಿಹರಿಸಲು ಗೋವಾ ಸರ್ಕಾರದೊಂದಿಗೆ ಯಾಕೆ ಮಾತುಕತೆ ನಡೆಸಬಾರದು.
-ರಮೇಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ
ಮಹಿಳೆಯರು, ವೃದ್ಧರು, ಮಕ್ಕಳನ್ನು ಕಟ್ಟಿಕೊಂಡು ರಾತ್ರಿ ಹೋಗುವುದೆಲ್ಲಿ ಎಂದು ಬೆಳಗಾಗುವ ತನಕ ಕನ್ನಡಿಗರು ಚಿಂತಿತರಾಗಿಯೆ ಇದ್ದರು. ಬೆಳಗಾಗುತ್ತಿದ್ದಂತೆ ಮನೆಯೊಳಗಿನ ಸಾಮಗ್ರಿಗಳನ್ನು ಹೊರಹಾಕಲೂ ಬಿಡದಂತೆ ಜೆಸಿಬಿಗಳು ಮುಗಿಬಿದ್ದವು. ಈಗ 200ಕ್ಕೂ ಹೆಚ್ಚು ಮಂದಿ ಅಕ್ಷರಶಃ ಬೀದಿಪಾಲಾಗಿದ್ದಾರೆ. ಆಗಾಗ ಮಳೆಯೂ ಸುರಿಯುತ್ತಿದೆ. ಮೇಲಾಗಿ ಎಲ್ಲರೂ ಬಡ ಕೂಲಿ ಕಾರ್ಮಿಕರು. ಕೈಯಲ್ಲಿ ಕಾಸಿಲ್ಲ. ಊರಿಗೆ ಹೋಗಲೂ ಆಗದ ಸ್ಥಿತಿ. ಮನೆ ಕಳೆದುಕೊಂಡವರಲ್ಲಿ ಉತ್ತರ ಕರ್ನಾಟಕದ ವಿಜಯಪುರ ಹಾಗೂ ಬಾಗಲಕೋಟೆ ಮೂಲದ ಕಾರ್ಮಿಕರೇ ಹೆಚ್ಚು.
ಕಳೆದ ಬಾರಿ ಗೋವಾ ಚುನಾವಣೆಯಲ್ಲಿ ಕರ್ನಾಟಕದ ಮಾಜಿ ಸಿಎಂ ಯಡಿಯೂರಪ್ಪ ಬಂದು ಕನ್ನಡಿಗರೆ ನಿರ್ಣಾಯಕವಾಗಿರುವ ಮರ್ಮಗೋವಾ, ದಾಬೋಲಿಂ, ಕೊರ್ತಾಲಿಂ ಹಾಗೂ ವಾಸ್ಕೋಗಳಲ್ಲಿ ಪ್ರಚಾರ ಮಾಡಿ, ಕನ್ನಡಿಗರಿಗೆ ಭದ್ರತೆಯ ಭರವಸೆ ಮೂಡಿಸಿದ್ದರು. ನಂತರ ಆ ನಾಲ್ಕೂ ಕ್ಷೇತ್ರಗಳನ್ನು ಬಿಜೆಪಿ ಗೆದ್ದಿತು.
ಹಿಂದೆ ಬೈನಾದಲ್ಲಿ ಮನೆಗಳನ್ನು ಮುರಿದಾಗ ಕರ್ನಾಟಕದ ಸಚಿವ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಆಗಮಿಸಿ ಇನ್ನು ಮುಂದೆ ಮನೆ ಮುರಿಯದಂತೆ ಸರ್ಕಾರಕ್ಕೆ ವಿನಂತಿ ಮಾಡುತ್ತೇವೆ. ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿಕೊಡಲು ಮಾತುಕತೆ ನಡೆಸುತ್ತೇವೆ ಎಂದು ಭರವಸೆ ನೀಡಿ ಹೋಗಿದ್ದರು. ಆದರೆ ಈ ನಾಯಕರು ಈಗೆಲ್ಲಿ ಹೋಗಿದ್ದಾರೆ ಎಂದು ಕರ್ನಾಟಕದ ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳ ಮುಖಂಡರ ಮೇಲೆ ಇವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ಅಖಿಲ ಗೋವಾ ಕನ್ನಡಿಗರ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ ಅವರಷ್ಟೇ ನಿರಾಶ್ರಿತರಿಗೆ ಈಗ ಆಧಾರವಾಗಿದ್ದಾರೆ. ಅವರಿಗೆ ಧೈರ್ಯ ತುಂಬುತ್ತಿದ್ದಾರೆ.
