"ಬಂಗಾಳ ಸರಕಾರದೊಂದಿಗೆ ಯಾವುದೇ ಮಾತುಕತೆಗೆ ಕೂರದಿರಲು ನಿರ್ಧರಿಸಿದ್ದೇವೆ. ಸಿಎಂ ಜೊತೆ ಇನ್ಯಾವತ್ತೂ ಮಾತುಕತೆ ಇಲ್ಲ. ಕೇಂದ್ರ ಸರಕಾರ ಗೋರ್ಖಾಲ್ಯಾಂಡ್ ವಿಚಾರದ ಬಗ್ಗೆ ಮಾತನಾಡಲು ಕರೆದರೆ ಮಾತ್ರ ಮಾತುಕತೆಗೆ ಮುಂದಾಗುತ್ತೇವೆ," ಎಂದು ಜಿಜೆಎಂ ಸ್ಪಷ್ಟಪಡಿಸಿದೆ.

ಕೋಲ್ಕತಾ(ಜುಲೈ 8): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ತಾನು ಮಾತುಕತೆ ನಡೆಸಲು ಸಿದ್ಧವಿಲ್ಲ ಎಂದು ಗೋರ್ಖಾ ಜನಮುಕ್ತಿ ಮೋರ್ಚಾ(ಜಿಜೆಎಂ) ಹೇಳಿದೆ. ಮಾತಕತೆಗೆ ಮಮತಾ ಕೊಟ್ಟ ಕರೆಯನ್ನು ಮೋರ್ಚಾ ತಿರಸ್ಕರಿಸಿದೆ. ಗೋರ್ಖಾ ಹೋರಾಟಗಾರರ ಮೇಲೆ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದ್ದರೂ ಸಿಎಂ ಮಮತಾ ಬ್ಯಾನರ್ಜಿ ಕಣ್ಮುಚ್ಚಿ ಕುಳಿತಿದ್ದಾರೆ. ಇವರೊಂದಿಗೆ ಯಾವುದೇ ಕಾರಣಕ್ಕೂ ಮಾತುಕತೆ ಸಾಧ್ಯವಿಲ್ಲ ಎಂದು ಜಿಜೆಎಂನ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

"ಅಮಾಯಕ ಜನರನ್ನ ಪೊಲೀಸರು ಕೊಲ್ಲುತ್ತಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಬಸಿರ್'ಹತ್'ನ ಒಂದು ಘಟನೆಯು ಎಲ್ಲಾ ರಾಷ್ಟ್ರೀಯ ಪಕ್ಷಗಳ ಗಮನ ಸೆಳೆಯಿತು. ಆದರೆ, ಒಂದೇ ತಿಂಗಳ ಅವಧಿಯಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ಹಲವು ಜನರನ್ನು ಕೊಲ್ಲಲಾಗಿದ್ದರೂ ಯಾವುದೇ ರಾಷ್ಟ್ರೀಯ ಪಕ್ಷ ಅದನ್ನು ಖಂಡಿಸದೇ ಇರುವುದು ದುರದೃಷ್ಟವೇ ಸರಿ. ನಾವು ಭಾರತದ ಭಾಗವಾಗಿದ್ದೇವಾ ಇಲ್ಲವಾ ಎಂದು ರಾಜಕೀಯ ಪಕ್ಷಗಳು ಹಾಗೂ ನೇತಾರರನ್ನು ಕೇಳಬಯಸುತ್ತೇವೆ" ಎಂದು ಗೋರ್ಖಾ ಮುಕ್ತಿಮೋರ್ಚಾ ಹೇಳಿದೆ.