ಬೆಂಗಳೂರು [ಜು.30]:  ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೇ ನಿಮ್ಮನ್ನು ಮುಖ್ಯಮಂತ್ರಿ ಮಾಡಿದ ಅನರ್ಹ ಶಾಸಕರನ್ನು ಕೈ ಬಿಡಬೇಡಿ. ಅವರನ್ನು ತಬ್ಬಲಿ ಮಾಡದೆ ಸೂಕ್ತ ಸಚಿವ ಸ್ಥಾನ ಹಾಗೂ ನೀವು ಕೊಟ್ಟಭರವಸೆ ಈಡೇರಿಸಿ. ನಿಮ್ಮ ಜತೆಯೇ ಸರ್ಕಾರಕ್ಕೆ ಸೇರಿಸಿಕೊಳ್ಳಿ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಸೋಮವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಾಸ ಮತ ಯಾಚನೆಯಲ್ಲಿ ಯಶಸ್ವಿಯಾದ ಬಳಿಕ ಅನರ್ಹ ಶಾಸಕರಿಗೆ ನೀವು ಕೃತಜ್ಞತೆ ಸಲ್ಲಿಸಬೇಕಾಗಿತ್ತು ಆದರೆ ಸಲ್ಲಿಸಿಲ್ಲ. ಅವರಿಗೆ ಸಚಿವ ಸ್ಥಾನಮಾನಗಳನ್ನಾದರೂ ನೀಡಿ ಕೃತಜ್ಞತೆ ಸಲ್ಲಿಸಿ. ಎಲ್ಲವನ್ನೂ ನಿಮ್ಮ ಪಕ್ಷದವರಿಗೆ ನೀಡಿ ಅವರನ್ನು ತಬ್ಬಲಿ ಮಾಡಬೇಡಿ ಎಂದು ಹೇಳಿದರು.

ಪ್ರಸ್ತುತ ನಿಮಗೆ ಸ್ಪಷ್ಟಬಹುಮತ ಇಲ್ಲದಿದ್ದರೂ ವಿಶ್ವಾಸಮತ ಗೆದ್ದಿದ್ದೀರಿ. ಹೀಗಾಗಿ ನಿಮಗೆ ಶುಭಾಶಯ ತಿಳಿಸುತ್ತೇನೆ. ಕಾಂಗ್ರೆಸ್‌ ಪಕ್ಷದ ವಿಪ್‌ಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎಂದು ಹೇಳಿರುವ ನೀವು ನಿಮ್ಮ ಪಕ್ಷದ ಶಾಸಕರಿಗೆ ವಿಶ್ವಾಸಮತ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ವಿಪ್‌ ನೀಡಿದ್ದಿರಿ. ಈಗ ಹೇಳಿ, ವಿಪ್‌ಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲವೇ ಎಂದು ಪ್ರಶ್ನಿಸಿದರು.

ಹೊಸ ಅಧ್ಯಾಯ ಶುರುವಾಗಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೇ 15-16 ಮಂದಿ ಶಾಸಕರು ನಿಮಗೆ ರಕ್ಷಣೆ ನೀಡಿದ್ದಾರೆ. ನಿಮ್ಮನ್ನು ಮುಖ್ಯಮಂತ್ರಿ ಮಾಡಿ ಅನರ್ಹರಾದವರನ್ನು ಮರೆಯಬೇಡಿ. ಅವರಿಗೂ ಉತ್ತಮ ಖಾತೆಯ ಸಚಿವ ಸ್ಥಾನ ಹಾಗೂ ಅವರ ರಕ್ಷಣೆ ಸೇರಿದಂತೆ ನೀವು ಏನೇನು ಭರವಸೆ ನೀಡಿದ್ದೀರೋ ಅದೆಲ್ಲವನ್ನೂ ನೀಡಿ ಪ್ರಮಾಣವಚನ ಸ್ವೀಕರಿಸುವಂತೆ ಮಾಡಿ ಎಂದು ಸಲಹೆ ನೀಡಿದರು.