ಬೆಂಗಳೂರು :  ಸರ್ಕಾರಿ ಪದವಿ ಕಾಲೇಜುಗಳಲ್ಲಿ ಐಚ್ಛಿಕ ಕನ್ನಡ ವಿಷಯಕ್ಕೆ ಕನಿಷ್ಠ ಐವರು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೂ ಬೋಧನೆಗೆ ಅವಕಾಶ ಕಲ್ಪಿಸುವಂತೆ ಕೋರಿ ಉನ್ನತ ಶಿಕ್ಷಣ ಇಲಾಖೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಪದವಿ ಕಾಲೇಜುಗಳಲ್ಲಿ ತರಗತಿಗಳನ್ನು ನಡೆಸಲು ಕನಿಷ್ಠ 15 ವಿದ್ಯಾರ್ಥಿಗಳಿರಬೇಕೆಂದು ನಿಗದಿ ಮಾಡಲಾಗಿದೆ. ಆದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರತಿಯೊಬ್ಬರಿಗೂ ಕನ್ನಡ ಕಲಿಯಲು ಅವಕಾಶ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದೆ. ಕನ್ನಡ ಕಲಿಯಲು ಯಾರೊಬ್ಬರೂ ಅವಕಾಶ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. ವಿದ್ಯಾರ್ಥಿಗಳ ಸಂಖ್ಯೆ ಒಂದಂಕಿ ಮೀರದಿದ್ದರೆ ಪಾಠ ಬೋಧನೆ, ಪ್ರಾಧ್ಯಾಪಕರ ನೇಮಕ, ಸೌಲಭ್ಯ ಕಲ್ಪಿಸಲು ಸಹ ಕಷ್ಟಕರವಾಗುತ್ತದೆ. ಈ ಕಾರಣದಿಂದಲೇ ಒಂದಂಕಿ ಮೀರದಿದ್ದರೆ ಬೋಧನೆಗೆ ಅವಕಾಶ ನೀಡುತ್ತಿಲ್ಲ ಎಂದುಬಂದಿದೆ.

ಉಳಿದ ವಿಷಯಗಳಿಗೆ ನಿಯಮ:

ಸರ್ಕಾರಿ ಪದವಿ ಕಾಲೇಜಿನಲ್ಲಿ 15ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ದಾಖಲಾಗುವ ವಿಭಾಗ ಅಥವಾ ಕಾಂಬಿನೇಷನ್‌ ನಡೆಸಬಾರದು ಎಂದು ಈ ಹಿಂದೆ ನೀಡಿದ್ದ ಸೂಚನೆಯನ್ನೇ ಮುಂದುವರಿಸಲಾಗಿದೆ. ಕಾಯಂ ಉಪನ್ಯಾಸಕರ ಕಾರ್ಯಭಾರ ನಿಯೋಜನೆ ಹಾಗೂ ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಈ ಅಂಶಗಳನ್ನು ಗಂಭೀರವಾಗಿ ಗಮನಿಸಿಕೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.

ದಾಖಲಾತಿ ಸಂದರ್ಭದಲ್ಲೇ ವಿದ್ಯಾರ್ಥಿಗಳಿಗೆ ಈ ವಿಷಯವನ್ನು ಮನದಟ್ಟು ಮಾಡಿಕೊಡಬೇಕು. ಬಿಎ, ಬಿ.ಕಾಂ, ಬಿಬಿಎಂ, ಭಾಷೆ ಹಾಗೂ ಐಚ್ಛಿಕ ವಿಷಯದ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 99ಕ್ಕಿಂತ ಅಧಿಕ ಹಾಗೂ ಬಿಎಸ್ಸಿ ತರಗತಿಯಲ್ಲಿ 66ಕ್ಕಿಂತ ಅಧಿಕ ವಿದ್ಯಾರ್ಥಿಗಳಿದ್ದರೆ ಎರಡನೇ ವಿಭಾಗ ತೆರೆದು ವಿದ್ಯಾರ್ಥಿಗಳನ್ನು ಹಂಚಿಕೆ ಮಾಡಬೇಕು. ಅದರಂತೆಯೇ ಉಪನ್ಯಾಸಕರಿಗೆ ಕಾರ್ಯಭಾರ ನಿಯೋಜನೆ ಮಾಡಬೇಕು ಎಂದು ಇಲಾಖೆ ಪ್ರಾಂಶುಪಾಲರಿಗೆ ನಿರ್ದೇಶಿಸಿದೆ.