ಬೆಂಗಳೂರು: ಪೋಷಕರು ಬೇರೊಬ್ಬರೊಂದಿಗೆ ವಿವಾಹ ಮಾಡುತ್ತಾರೆಂದು ಆತಂಕಗೊಂಡು ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಅಪ್ರಾಪ್ತೆ ಬಳಿಕ ಸಮಸ್ಯೆಯಿಂದ ಪಾರಾಗಲು ತನ್ನನ್ನು ಅಪಹರಿಸಿದ್ದಾಗ್ಯೂ, ತನ್ನ ಮೇಲೆ ಅತ್ಯಾಚಾರ ನಡೆದಿರುವುದಾಗಿಯೂ ಸುಳ್ಳು ಹೇಳಿ ಕೊನೆಗೆ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ.
ಪೋಷಕರ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಗುಡ್ಡದಹಳ್ಳಿಯ ಫರ್ಖಾನ್ ಅಹ್ಮದ್ (18) ಹಾಗೂ ಆತನ ಸ್ನೇಹಿತ ಸಂದೀಪ್ (18) ಎಂಬಾತನ ಅಪಹರಣದ ಆರೋಪ ದಡಿ ಬಂಧಿಸಿದ್ದು, ಜೈಲಿಗೆ ಕಳುಹಿಸಿದ್ದಾರೆ.
ಫರ್ಖಾನ್ ಹಾಗೂ ಬಾಲಕಿ ಚಾಮರಾಜಪೇಟೆಯ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಫರ್ಖಾನ್ ಅನ್ಯ ಧರ್ಮೀಯನೆಂಬ ಕಾರಣಕ್ಕೆ ಬಾಲಕಿ ಮನೆಯವರು ಮದುವೆಗೆ ನಿರಾಕರಿಸಿದ್ದರು. ಇದರಿಂದ ಗೊಂದಲಕ್ಕೀಡಾದ ಬಾಲಕಿ, ಮನೆಯಿಂದ ಪರಾರಿಯಾಗಿದ್ದಳು. ಈ ಸಂಬಂಧ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಾಲಕಿ ತಾಯಿಗೆ ಆರೋಗ್ಯ ಹದಗೆಟ್ಟಿದೆ ಎಂದು ಪೊಲೀಸರು ಕಳುಹಿಸಿದ ಸಂದೇಶ ಓದಿದ ನಂತರ ಮನೆಗೆ ಬಂದ ಬಾಲಕಿ, ಪೋಷಕರಿಂದ ತಪ್ಪಿಸಿಕೊಳ್ಳಲು ಸುಳ್ಳಿನ ಕತೆ ಕಟ್ಟಿದ್ದಾಳೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ಕನ್ನಡಪ್ರಭ ವಾರ್ತೆ)
