ಯುವಕನೊಬ್ಬ ಬಲವಂತದಿಂದ  ಮುತ್ತು ಕೊಟ್ಟಿದ್ದರಿಂದ  ಮನನೊಂದ ಯುವತಿಯೊಬ್ಬಳು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ  ಹನುಮಾಪುರ ತಾಂಡದ ಬಳಿ ನಡೆದಿದೆ.

ರಾಣಿಬೆನ್ನೂರು: ಯುವಕನೊಬ್ಬ ಬಲವಂತದಿಂದ ಮುತ್ತು ಕೊಟ್ಟಿದ್ದರಿಂದ ಮನನೊಂದ ಯುವತಿಯೊಬ್ಬಳು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಹನುಮಾಪುರ ತಾಂಡದ ಬಳಿ ನಡೆದಿದೆ.

ತಾಂಡಾದ ರೇಷ್ಮಾ ಪೀರಪ್ಪ ಲಮಾಣಿ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಉತ್ಸವ ನೋಡಲು ಆ.26ರಂದು ಯುವತಿ ತೆರಳಿದ್ದಳು. ಈ ವೇಳೆ ಕಾರ್ಯಕ್ರಮಕ್ಕೆ ಬಂದಿದ್ದ ಅದೇ ಗ್ರಾಮದ ಯುವಕ ಸಂತೋಷ್ ಲಮಾಣಿ ಎಂಬಾತ ಆಕೆಗೆ ಬಲವಂತವಾಗಿ ಮುತ್ತು ಕೊಟ್ಟು ಸ್ಥಳದಿಂದ ಪರಾರಿಯಾಗಿದ್ದ. ಘಟನೆಯಿಂದ ಮನನೊಂದ ಯುವತಿ ಗ್ರಾಮದ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ರಾಣೆಬೆನ್ನೂರು ಗ್ರಾಮಾಂತರ ಠಾಣೆಯಲ್ಲಿ ಯುವತಿ ಕುಟುಂಬದವರು ಪ್ರಕರಣ ದಾಖಲಿಸಿದ್ದು ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.

ಹೆದ್ದಾರಿ ತಡೆದು ಪ್ರತಿಭಟನೆ: ಯುವತಿ ಆತ್ಮಹತ್ಯೆಯಿಂದ ಆಕ್ರೋಶಗೊಂಡ ಕುಟುಂಬಸ್ಥರು, ಸಂಬಂಧಿಕರು ಹಾಗೂ ಗ್ರಾಮಸ್ಥರು, ಆರೋಪಿ ಸಂತೋಷನನ್ನು ಬಂಧಿಸುವಂತೆ ಆಗ್ರಹಿಸಿ ಮಂಗಳವಾರ ರಾಣಿಬೆನ್ನೂರು ಠಾಣೆಗೆ ಮುತ್ತಿಗೆ ಹಾಕಿ, ಇಲ್ಲಿನ ಪಿ.ಬಿ. ರಸ್ತೆಯಲ್ಲಿ ಒಂದು ಗಂಟೆ ವಾಹನ ತಡೆದು ಪ್ರತಿಭಟನೆ ನಡೆಸಿದರು.

ಆರೋಪಿ ಈ ಹಿಂದೆಯೂ ನಾಲ್ವರು ಯುವತಿಯರೊಂದಿಗೆ ಇದೇ ರೀತಿ ವರ್ತಿಸಿದ್ದ. ಆತನನ್ನು ಬಂಧಿಸುವವರೆಗೆ ಮೃತಳ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಪಟ್ಟುಹಿಡಿದರು. ಆರೋಪಿಯನ್ನು ಬಂಧಿಸುವ ಭರವಸೆಯನ್ನು ಪೊಲೀಸರು ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು.