ರಘು ಕಾರ್ನಾಡ್‌ಗೆ 1.25 ಕೋಟಿ ರೂ. ಮೊತ್ತದ ‘ವಿಂಧಾಮ್ ಕ್ಯಾಂಬೆಲ್ ಪ್ರಶಸ್ತಿ’
ಗಿರೀಶ್ ಕಾರ್ನಾಡ್ ಅವರ ಪುತ್ರ ರಘು ಕಾರ್ನಾಡ್ ಅವರಿಗೆ ‘ವಿಂಧಾಮ್ ಕ್ಯಾಂಬೆಲ್ ಪ್ರಶಸ್ತಿ’/ ಬರೋಬ್ಬರಿ 1.25 ಕೋಟಿ ರೂ. ಮೊತ್ತದ ಪ್ರಶಸ್ತಿ/ ಎರಡನೇ ಮಹಾಯುದ್ಧದ ಸಂದರ್ಭದ ಘಟನಾವಳಿಗಳು
ಬೆಂಗಳೂರು[ಸೆ. 20] ಜ್ಞಾನಪೀಠ ಸಾಹಿತಿ ಗಿರೀಶ್ ಕಾರ್ನಾಡ್ ಅವರ ಪುತ್ರ ರಘು ಕಾರ್ನಾಡ್ ಅವರಿಗೆ "ವಿಂಧಾಮ್ ಕ್ಯಾಂಬೆಲ್ ಪ್ರಶಸ್ತಿ" ಪ್ರದಾನ ಮಾಡಲಾಗಿದೆ. ಇದು ಬರೋಬ್ಬರಿ 1.25 ಕೋಟಿ ರೂ. ಮೊತ್ತದ ಪ್ರಶಸ್ತಿ.
ಅಮೆರಿಕದ ಯೇಲ್ ವಿಶ್ವವಿದ್ಯಾಲಯ ಪ್ರತಿಷ್ಠಿತ ’ವಿಂಧಾಮ್ ಕ್ಯಾಂಬೆಲ್ ಪ್ರಶಸ್ತಿಯನ್ನು ರಘು ಅವರಿಗೆ ನೀಡಿದೆ. ರಘು ಕಾರ್ನಾಡ್ ಅವರ [Farthest Field: An Indian Story of the Second World War] ‘ಫಾರ್ದೆಸ್ಟ್ ಫೀಲ್ಡ್: ಆನ್ ಇಂಡಿಯನ್ ಸ್ಟೋರಿ ಆಫ್ ದಿ ಸೆಕೆಂಡ್ ವರ್ಲ್ಡ್ ವಾರ್’ ಪುಸ್ತಕಕ್ಕಾಗಿ ಈ ಪ್ರಶಸ್ತಿ ಒಲಿದಿದೆ.
ಪ್ರೀತಿಯ ಅಪ್ಪನಿಗೊಂದು ಹೃದಯಸ್ಪರ್ಶಿ ಶ್ರದ್ಧಾಂಜಲಿ: ಕಾರ್ನಾಡ್‌ಗೆ ಪುತ್ರನಿಂದ ಅಕ್ಷರ ನಮನ
2ನೇ ಮಹಾಯುದ್ಧದ ಸಂದರ್ಭ ಸಂಪರ್ಕ ಕಳೆದುಕೊಂಡ ಹೆಲಿಕಾಪ್ಟರ್ ನಲ್ಲಿ ಇದ್ದ 5 ಜನರ ಕತೆಯನ್ನು ಈ ಪುಸ್ತಕ ಹೇಳುತ್ತದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಈಶಾನ್ಯ ಭಾರತದಲ್ಲಿ ಬದುಕುಳಿದವರ ಬಗ್ಗೆ 2012ರಲ್ಲಿ ಪ್ರಕಟವಾದ ಪ್ರಬಂಧವೊಂದರ ಮುಂದುವರಿದ ಭಾಗವೇ ಈ ಪುಸ್ತಕ ಎನ್ನಬಹುದಾಗಿದೆ.
ಈ ಪುಸ್ತಕ ಭಾರತದ ಹೊರಗೆ ಇಷ್ಟೊಂದು ಖ್ಯಾತಿಪಡೆಯಲಿದೆ ಎಂದುಕೊಂಡಿರಲಿಲ್ಲ. ಸಾಹಿತ್ಯ ಗುರುತಿಸಿ ನನಗೆ ಇಂಥ ಮಹೋನ್ನತ ಪ್ರಶಸ್ತಿ ನೀಡಿರುವುದು ಅನೇಕರಿಗೆ ಸ್ಫೂರ್ತಿಯಾಗಬಹುದು ಎಂದು ಹೇಳಿದ್ದಾರೆ.
ಪ್ರತಿಷ್ಠಿತ ಪ್ರಶಸ್ತಿ ಜತೆಗೆ165000 ಅಮೆರಿಕನ್ ಡಾಲರ್ (ಸುಮಾರು ಒಂದೂಕಾಲು ಕೋಟಿ ರೂ.) ನಗದು ಬಹುಮಾನ ಹೊಂದಿದೆ. ರಘು ಅವರನ್ನು ಒಳಗೊಂಡು ಒಟ್ಟು ಎಂಟು ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಏನಿದು ಪ್ರಶಸ್ತಿ? 2013ರಲ್ಲಿ ಪ್ರಶಸ್ತಿಯನ್ನು ಸ್ಥಾಪನೆ ಮಾಡಲಾಯಿತು. ಡೋನಾಲ್ಡ್ ವಿಂಧಾಮ್ ತಮ್ಮ 40 ವರ್ಷದ ಗೆಳೆಯ ಸ್ಯಾಂಡಿ ಕ್ಯಾಂಬೆಲ್ ಅವರ ನೆನಪಿನಲ್ಲಿ ಈ ಪ್ರಶಸ್ತಿ ಸ್ಥಾಪನೆ ಮಾಡಿದ್ದು ಅತಿ ಹೆಚ್ಚಿನ ಮೊತ್ತದ ಮತ್ತು ಅಷ್ಟೇ ಪ್ರತಿಷ್ಠಿತ ಪ್ರಶಸ್ತಿಯಾಗಿ ಗುರುತಿಸಿಕೊಂಡಿದೆ.