ನವದೆಹಲಿ(ಜೂ.25):‘ಬಹಳ ಜತನದಿಂದ ಕಟ್ಟಿದ ಪ್ರೀತಿಯ ಭಾರತವನ್ನು ಭಾರತೀಯರಿಗೆ ಮರಳಿಸಿ, ನಿಮ್ಮ ದ್ವೇಷದ ಭಾರತವನ್ನು ನೀವೇ ಇಟ್ಟುಕೊಳ್ಳಿ..’ ಇದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಕೇಂದ್ರ ಸರ್ಕಾರಕ್ಕೆ ನೀಡಿದ ಮಾತಿನೇಟಿನ ಪರಿ.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಭಾಷಣ ಮಾಡಿದ ಗುಲಾಂ ನಬಿ ಆಜಾದ್, ರಾಜಕೀಯ ಲಾಭಕ್ಕಾಗಿ ಭಾರತೀಯ ಸಮಾಜವನ್ನು ವಿಘಟಿಸುವ ಹುನ್ನಾರವನ್ನು ಟೀಕಿಸಿದರು.

ದ್ವೇಷದ ಭಾರತ ನೀವಿಟ್ಟ‘ಕೊಳ್ಳಿ’: ಅದನ್ನು ನೀವೇ ಇಟ್ಟುಕೊಳ್ಳಿ!

ಸ್ವಾತಂತ್ರ್ಯಾನಂತರ ಭಾರತದ ಸಾಮಾಜಿಕ ಸಾಮರಸ್ಯವನ್ನು ಬಹಳ ಜೋಪಾನವಾಗಿ ಕಾಯ್ದುಕೊಂಡು ಬರಲಾಗಿದೆ. ಇದಕ್ಕಾಗಿ ಅಸಂಖ್ಯಾತ ಜನರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ಆದರೆ ಪ್ರಸಕ್ತ ಆಡಳಿತದಲ್ಲಿರುವ ಪಕ್ಷ ಅಧಿಕಾರಕ್ಕಾಗಿ ಈ ಸಾಮರಸ್ಯ ಹಾಳು ಮಾಡುತ್ತಿದ್ದು, ದ್ವೇಷದ ಭಾರತ ನೀವೇ ಇಟ್ಟುಕೊಳ್ಳಿ ಎಂದು ಆಜಾದ್ ಸರ್ಕಾರವನ್ನು ಚುಚ್ಚಿದರು. 

ನಿರುದ್ಯೋಗ ಸಮಸ್ಯೆ ಪೆಡಂಭೂತವಾಗಿ ದೇಶವನ್ನು ಕಾಡುತ್ತಿದ್ದು, ಆರ್ಥಿಕ ಅಸಮಾನತೆ ಹೋಗಲಾಡಿಸಬೇಕಾದ ಸರ್ಕಾರ ಮತೀಯ ಭಾವನೆ ಕೆರಳಿಸುತ್ತಾ ಅಧಿಕಾರದ ರುಚಿ ಅನುಭವಿಸುತ್ತಿದೆ ಎಂದು ಆಜಾದ್ ಕಿಡಿಕಾರಿದರು.

ಆಜಾದ್ ಭಾಷಣದ ವೇಳೆ ಸದನದಲ್ಲಿ ಹಾಜರಿದ್ದ ಪ್ರಧಾನಿ ಮೋದಿ, ವಿಪಕ್ಷ ನಾಯಕರ ಮಾತುಗಳನ್ನು ಗಮನವಿಟ್ಟು ಕೇಳಿಸಿಕೊಂಡಿದ್ದು ವಿಶೇಷವಾಗಿತ್ತು.