ಲಕ್ನೋ : ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಽಳೆ ಪಕ್ಷಗಳು ಗೆಲುವಿಗಾಗಿ ಸಿದ್ಧತೆ ನಡೆಸಿವೆ. 

ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ ಉತ್ತರ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರೊಂದಿಗಿನ  ಸತತ 15 ಗಂಟೆಗಳ ಅತೀ ದೀರ್ಘಾವಧಿಯ ಸಭೆಯನ್ನು ನಡೆಸಿದರು. 

ದೇಶದಲ್ಲೇ ಅತ್ಯಂತ ಹೆಚ್ಚಿನ ರಾಜಕೀಯ ಚಟುವಟಿಕೆ ಇರುವ ಉತ್ತರ ಪ್ರದೇಶದಲ್ಲಿ ಮುಂದಿನ 2019ರ ಲೋಕಸಭಾ ಚುನಾವಣೆ ಎದುರಿಸುವ ಬಗ್ಗೆ ಈ ವೇಳೆ ಸುದೀರ್ಘ ಮಾತುಕತೆ ನಡೆಸಿದರು. 

ಮುಂಬರುವ ಲೋಕಸಭಾ ಚುನಾವಣೆ ನಿಟ್ಟಿನಲ್ಲಿ ಉತ್ತರ ಪ್ರದೇಶದ 41 ಕ್ಷೇತ್ರಗಳ ಜವಾಬ್ದಾರಿಯನ್ನು ಪ್ರಿಯಾಂಕ ಗಾಂಧಿ ವಹಿಸಿಕೊಂಡಿದ್ದು , ಗೆಲುವಿನ ತಂತ್ರಗಳ ಬಗ್ಗೆ ಚರ್ಚಿಸಿದ್ದಾರೆ.  ಇನ್ನು ಜ್ಯೋತಿರಾದಿತ್ಯ ಸಿಂಧಿಯಾ ಕೂಡ 39 ಕ್ಷೇತ್ರಗಳ ಜವಾಬ್ದಾರಿ ವಹಿಸಿಕೊಂಡಿದ್ದು, ಈ ವೇಳೆ ಸೂಕ್ತ ಅಭ್ಯರ್ಥಿಗಳ ಆಯ್ಕೆ ಬಗ್ಗೆಯೂ ಕೂಡ ಮಾತುಕತೆ ನಡೆಸಲಾಗಿದೆ.  

ಎಲ್ಲಾ ಕ್ಷೇತ್ರಗಳ ಕಾರ್ಯಕರ್ತರನ್ನೂ ಪ್ರಿಯಾಂಕ ಭೇಟಿ ಮಾಡಿದ್ದು, ಉತ್ತರ ಪ್ರದೇಶದ 80 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್  ಸ್ಪರ್ಧೆ ಮಾಡಲಿದೆ ಎಂದು ಪ್ರಿಯಾಂಕಾ ಜಿ ತಿಳಿಸಿದ್ದಾರೆ ಎಂಬುದಾಗಿ ಕಾರ್ಯಕರ್ತ ಆರಾಧನಾ ಮಿಶ್ರಾ ತಿಳಿಸಿದರು.  

ಅಲ್ಲದೇ ಬಿಜೆಪಿಯು ಅತ್ಯಂತ ಪ್ರಭಲವಾಗಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್  ಅಭ್ಯರ್ಥಿಗಳು ಯಾರಾಗಬೇಕು ಎನ್ನುವುದನ್ನೂ ಕೂಡ ಈ ಸಭೆಯಲ್ಲಿ ಚರ್ಚಿಸಲಾಗಿದೆ. 

ಗುರುವಾರ ಮುಂಜಾನೆ 2.30ರ ಸುಮಾರಿಗೆ ಸಭೆ ಮುಕ್ತಾಯವಾಗಿದ್ದು,  ಎಲ್ಲಾ ಕಾರ್ಯಕರ್ತರೂ ಕೂಡ ಗೆಲುವಿಗಾಗಿ  ಯಾವ ರೀತಿ ಕಾರ್ಯನಿರ್ವಹಿಸಬೇಕು ಎನ್ನುವ ಬಗ್ಗೆ ತಮ್ಮ ತಮ್ಮ ಸಲಹೆಗಳನ್ನು ನೀಡಿದ್ದಾರೆ ಎಂದು ಪ್ರಿಯಾಂಕ ತಿಳಿಸಿದರು.