ಪ್ಯಾನ್‌ಕಾರ್ಡ್ ಪಡೆಯಲು ಇದೀಗ ದಿನಗಟ್ಟಲೆ ಕಾಯಬೇಕಿಲ್ಲ. ಅರ್ಜಿ ಹಾಕಿದ ತಕ್ಷಣ ಪ್ಯಾನ್ ನಂಬರ್ ನೀಡುವ ಇನ್ಸ್‌ಟಂಟ್ ಯೋಜನೆಯನ್ನು ಆದಾಯ ತೆರಿಗೆ ಇಲಾಖೆ ಆರಂಭಿಸಿದೆ.
ನವದೆಹಲಿ : ಪ್ಯಾನ್‌ಕಾರ್ಡ್ ಪಡೆಯಲು ಇದೀಗ ದಿನಗಟ್ಟಲೆ ಕಾಯಬೇಕಿಲ್ಲ. ಅರ್ಜಿ ಹಾಕಿದ ತಕ್ಷಣ ಪ್ಯಾನ್ ನಂಬರ್ ನೀಡುವ ಇನ್ಸ್‌ಟಂಟ್ ಯೋಜನೆಯನ್ನು ಆದಾಯ ತೆರಿಗೆ ಇಲಾಖೆ ಆರಂಭಿಸಿದೆ. ಆದರೆ ಈ ಯೋಜನೆಗೆ ಆಧಾರ್ ಸಂಖ್ಯೆ ಕಡ್ಡಾಯ. ಮೊದಲ ಬಾರಿಗೆ ಪಾನ್ ಸಂಖ್ಯೆಯನ್ನು ಪಡೆಯಲು ಇಚ್ಛಿಸುವವರಿಗೆ ಈ ಯೋಜನೆ ಅನ್ವಯವಾಗಲಿದೆ.
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಸೇರಿದಂತೆ ವಿವಿಧ ವಹಿವಾಟಿಗೆ ಪ್ಯಾನ್ ಸಂಖ್ಯೆ ಕಡ್ಡಾಯ ಮಾಡಿರುವ ಕಾರಣ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿ ಸುವವರ ಸಂಖ್ಯೆ ಹೆಚ್ಚಾಗತೊಡಗಿದೆ. ಹೀಗಾಗಿ ಇಂಥವರಿಗೆ ಪ್ಯಾನ್ ಸಂಖ್ಯೆಯನ್ನು ತ್ವರಿತವಾಗಿ ನೀಡುವ ಉದ್ದೇಶದಿಂದ ಇನ್‌ಸ್ಟಂಟ್ ಪ್ಯಾನ್ ವಿತರಣೆ ಆರಂಭಿಸಲಾಗಿದೆ.
ಇದು ನಿಗದಿತ ಅವಧಿಗೆ ಲಭ್ಯವಾಗಿರುವ ಯೋಜನೆಯಾಗಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇರೆಗೆ ನೀಡಲಾಗುತ್ತದೆ. ಪ್ಯಾನ್‌ಗೆ ಅರ್ಜಿ ಸಲ್ಲಿಸಿದ ನಂತರ ಆಧಾರ್‌ನಲ್ಲಿ ಸಂಯೋಜನೆಯಾದ ಮೊಬೈಲ್ ನಂಬರ್‌ಗೆ ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ಬರುತ್ತದೆ. ಇದರ ಮೂಲಕ ಇನ್‌ಸ್ಟಂಟ್ ಪ್ಯಾನ್ ಸಂಖ್ಯೆ ಪಡೆಯಬಹುದು. ಆಧಾರ್‌ನಲ್ಲಿರುವ ವ್ಯಕ್ತಿ ವಿವರಗಳೇ ಪ್ಯಾನ್‌ನಲ್ಲೂ ನಮೂದಾಗುತ್ತವೆ. ಅರ್ಜಿ ಸಲ್ಲಿಸಿದ ಕೆಲವೇ ಕ್ಷಣಗಳಲ್ಲಿ ಆಧಾರ್ ಆಧರಿತ ಮರು ಪರಿಶೀಲನಾ ವ್ಯವಸ್ಥೆ ಮೂಲಕ ಪ್ಯಾನ್ ಸಂಖ್ಯೆಯನ್ನು ವಿತರಿಸಲಾಗುತ್ತದೆ. ಬಳಿಕ ಕೆಲವು ದಿವಸಗಳ ನಂತರ ಅಂಚೆ ಮೂಲಕ ಪ್ಯಾನ್ ಕಾರ್ಡು, ವ್ಯಕ್ತಿಯ ವಿಳಾಸಕ್ಕೆ ಬರುತ್ತದೆ.
https://www.incometaxindiaefiling.gov.in ಮೂಲಕ ಅರ್ಜಿ ಸಲ್ಲಿಸಿ ಈ ಪ್ರಯೋಜನ ಪಡೆಯಬಹುದಾಗಿದೆ. ಆಧಾರನ್ನು ಬಳಸಿಕೊಂಡು ತಕ್ಷಣವೇ ಸರ್ಕಾರಿ ಸೇವೆ ನೀಡುವ ಯತ್ನವಿದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
