ರಾಜ್ಯದಲ್ಲಿ ಮತ್ತೆ ಮಹಾ ಚುನಾವಣೆ : ವೇಳಾಪಟ್ಟಿ ಪ್ರಕಟ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Aug 2018, 7:22 AM IST
General election to local bodies 2018 date anounced
Highlights

ರಾಜ್ಯದಲ್ಲಿ ಮತ್ತೊಂದು ಮಹಾ ಚುನಾವಣೆಗೆ ಸಿದ್ಧತೆ ನಡೆದಿದೆ. ಈಗಾಗಲೇ ಚುನಾವಣೆ ವೇಳಾಪಟ್ಟಿಯನ್ನೂ ಕೂಡ ರಾಜ್ಯ ಚುನಾವಣಾ ಆಯೋಗ ಪ್ರಕಟ ಮಾಡಿದೆ. 

ಬೆಂಗಳೂರು : ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್-ಜೆಡಿಎಸ್ ಸರ್ಕಾರಕ್ಕೆ ಮೊದಲ ಅಗ್ನಿ ಪರೀಕ್ಷೆ ಎದುರಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ರಾಜ್ಯದ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಆ. 29ಕ್ಕೆ ಮತದಾನ ನಡೆಯಲಿದ್ದು, ಸೆ. 1ರಂದು ಫಲಿತಾಂಶ ಪ್ರಕಟವಾಗಲಿದೆ.

ಗುರುವಾರ ದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದ ರಾಜ್ಯ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ ಅವರು, ರಾಜ್ಯ ಚುನಾವಣಾ ಆಯೋಗವು 2013 ರಲ್ಲಿ ರಾಜ್ಯದ ಒಟ್ಟು 208 ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸಿತ್ತು. ಇವುಗಳ ಅವಧಿಯು 2018 ರ ಸೆಪ್ಟೆಂಬರ್ ಮತ್ತು 2019 ಮಾರ್ಚ್‌ನಲ್ಲಿ ಅವಧಿ ಮುಕ್ತಾಯವಾಗಲಿದೆ. 

ಹೀಗಾಗಿ ಎರಡು ಹಂತದಲ್ಲಿ ಚುನಾವಣೆ ನಡೆಸಬೇಕಾಗಿದೆ. ಸರ್ಕಾರವು 26 ನಗರ ಸ್ಥಳೀಯ ಸಂಸ್ಥೆಗಳನ್ನು ಉನ್ನತೀಕರಿಸಿದೆ ಮತ್ತು ನಾಲ್ಕು ಗ್ರಾಮ ಪಂಚಾಯಿತಿಗಳನ್ನು ನಗರ ಸ್ಥಳೀಯ ಸಂಸ್ಥೆಗಳನ್ನಾಗಿ ಪರಿವರ್ತಿಸಿದೆ. ಮೊದಲ ಹಂತದಲ್ಲಿ ಒಟ್ಟು 22 ಜಿಲ್ಲೆಗಳ 105 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 29 ನಗರ ಸಭೆಗಳು, 53 ಪುರಸಭೆ ಮತ್ತು 23 ಪಟ್ಟಣ ಪಂಚಾಯಿತಿಗಳಿಗೆ ಆ.29 ರಂದು ಚುನಾವಣೆ ನಡೆಯಲಿದೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿಗಳು ಆ.10 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ಅಂದಿನಿಂದ ನಾಮಪತ್ರ ಸಲ್ಲಿಕೆ ಕಾರ್ಯ  ಪ್ರಾರಂಭವಾಗಲಿದೆ. ನಾಮಪತ್ರ ಸಲ್ಲಿಕೆಗೆ ಆ. 17 ರಂದು ಕೊನೆಯ  ದಿನವಾಗಿರುತ್ತದೆ. ಆ. 18ರಂದು ನಾಮಪತ್ರಗಳನ್ನು ಪರಿಶೀಲನೆ ನಡೆಸಲಾಗುತ್ತದೆ. 

ಉಮೇದುವಾರಿಕೆಗಳನ್ನು ವಾಪಸ್ ಪಡೆಯಲು ಆ. 20 ರಂದು ಕೊನೆಯ ದಿನವಾಗಿದೆ ಎಂದು ತಿಳಿಸಿದರು. ಆ. 29ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ರಾಜ್ಯಾದ್ಯಂತ ಮತದಾನ ಪ್ರಕ್ರಿಯೆ ನಡೆಯಲಿದೆ. ಒಂದು ವೇಳೆ ಮರು ಮತದಾನ ನಡೆಸಬೇಕಾದ ಅಗತ್ಯತೆ ಬಿದ್ದರೆ ಆ. 31ರಂದು ನಡೆಸಲಾಗುವುದು. ಸೆ. 1ರಂದು ಮತ ಎಣಿಕೆ ಕಾರ್ಯ ತಾಲೂಕು ಕೇಂದ್ರಗಳಲ್ಲಿ ನಡೆಸಲಾಗುವುದು. ಅಂದೇ ಫಲಿತಾಂಶ ಪ್ರಕಟ
ಹಾಗೂ ಚುನಾವಣಾ ಪ್ರಕ್ರಿಯೆಗಳು ಮುಕ್ತಾಯವಾಗಲಿದೆ. 

 ಎರಡನೇ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಚುನಾವಣೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು. ಚುನಾವಣೆಗೆ ಆಯೋಗವು ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮತದಾರರ ಪಟ್ಟಿಯನ್ನು ತಯಾರಿಸಲಾಗಿದೆ. 

ಒಟ್ಟು 36,03,691 ಮತದಾರರಿದ್ದಾರೆ. ಈ ಪೈಕಿ ಪುರುಷರು 17,96,001, ಮಹಿಳೆಯರು 18,07,336 ಮತ್ತು ಇತರರು 354  ಮತದಾರರಿದ್ದಾರೆ. 290 ನಗರಸಭೆಯಲ್ಲಿ 927 ವಾಡ್ ಗರ್ಳು, 53 ಪುರಸಭೆಯಲ್ಲಿ 1,247 ವಾರ್ಡ್‌ಗಳು, 23 ಪಟ್ಟಣ ಪಂಚಾಯಿತಿಯಲ್ಲಿ 400 ವಾರ್ಡ್‌ಗಳು ಬರಲಿವೆ. ನಗರಸಭೆ ಚುನಾವಣೆಗೆ 2,067 ಮತಗಟ್ಟೆಗಳನ್ನು ಸ್ಥಾಪಿಸಿದರೆ, ಪುರಸಭೆ ಚುನಾವಣೆಗೆ 1,422ಮತಗಟ್ಟೆ ಮತ್ತು ಪಟ್ಟಣ ಪಂಚಾಯಿತಿ
ಚುನಾವಣೆಗೆ 408 ಮತಗಟ್ಟೆ ಸ್ಥಾಪಿಸಲಾಗಿದೆ ಎಂದರು. 

ಯಾರು, ಎಷ್ಟು ಖರ್ಚು ಮಾಡಬಹುದು?: ನಗರ ಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ 2 ಲಕ್ಷ ರು., ಪುರಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ  1.50 ಲಕ್ಷ ರು. ಮತ್ತು ಪಟ್ಟಣ ಪಂಚಾಯಿತಿ ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ 1 ಲಕ್ಷ ರು. ಮಿತಿಗೊಳಿಸಲಾಗಿದೆ. ಮತಯಂತ್ರಗಳನ್ನು ಬಳಸಿ ಈ ಚುನಾವಣೆಯನ್ನು ನಡೆಸಲಾಗುತ್ತಿದೆ. ಒಟ್ಟು 4,460 ಬ್ಯಾಲೆಟ್ ಯೂನಿಟ್ ಮತ್ತು 4,940 ಕಂಟ್ರೋಲ್ ಯೂನಿಟ್‌ಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಶ್ರೀನಿವಾಸಾಚಾರಿ ತಿಳಿಸಿದರು. 

ಮೊದಲ ಬಾರಿಗೆ ನೋಟಾ, ಭಾವಚಿತ್ರ ಮತಪತ್ರ: ಇದೇ ಮೊದಲ ಬಾರಿಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ‘ನೋಟಾ’ ಮತ್ತು ಅಭ್ಯರ್ಥಿಗಳ ಭಾವಚಿತ್ರ ಇರುವ ಮತ ಪತ್ರದ ವ್ಯವಸ್ಥೆ ಮಾಡಲಾಗಿದೆ. ಮತಪತ್ರದಲ್ಲಿ ಕೊನೆಯ ಅಭ್ಯರ್ಥಿ ನಂತರ ನೋಟಾವನ್ನು ಮುದ್ರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಮತದಾರರು ಯಾರಿಗೂ ಮತ ನೀಡಲು ಇಚ್ಛಿಸದಿದ್ದಲ್ಲಿ ‘ನೋಟಾ’ಗೆ ಮತ ಚಲಾಯಿಸಬಹುದಾಗಿದೆ. ಒಂದೇ ಹೆಸರಿನ ಅಭ್ಯರ್ಥಿಗಳ ಗೊಂದಲ ನಿವಾರಣೆಗೆ ಮತಪತ್ರದಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರ ಮುದ್ರಿಸುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

loader