ನೋಟು ರದ್ದತಿಯನ್ನು ಹೊರತುಪಡಿಸಿ ಅಂದಾಜು ಮಾಡಲಾಗಿದ್ದು, ಇದು ಮೂರು ವರ್ಷದಲ್ಲೇ ಕನಿಷ್ಠ ಅಲ್ಲದೆ ಕಳೆದ ಆರ್ಥಿಕ ವರ್ಷದಲ್ಲಿ ಜಿಡಿಪಿಯು ಶೇ.7.6 ದಾಖಲಾಗಿತ್ತು ಎಂದು ಅಂಕಿಅಂಶಗಳ ಕಾರ್ಯದರ್ಶಿಗಳಾದ ಟಿಸಿಎ ಅನಂತ್ ತಿಳಿಸಿದ್ದಾರೆ.
ನವದೆಹಲಿ(ಜ.6): ಹಿಂದಿನ 3 ವರ್ಷಗಳಿಗೆ ಹೋಲಿಸಿದರೆ ದೇಶದ ಜಿಡಿಪಿ(ಒಟ್ಟು ದೇಶೀಯ ಉತ್ಪನ್ನ)ಯು ಭಾರಿ ಪ್ರಮಾಣದಲ್ಲಿ ತಗ್ಗಿದ್ದು, 2016-17ರ ಅವಯಲ್ಲಿ ಶೇ.7.1ಕ್ಕೆ ಇಳಿಯಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕಳೆದ ವಿತ್ತೀಯ ವರ್ಷದಲ್ಲಿ ಇದು ಶೇ.7.6 ಮತ್ತು 2014-15ರಲ್ಲಿ ಶೇ.7.2 ಆಗಿತ್ತು.
ಅಕ್ಟೋಬರ್‌ವರೆಗಿನ ದತ್ತಾಂಶಗಳನ್ನು ಆಧರಿಸಿ ಜಿಡಿಪಿಯನ್ನು ಅಂದಾಜು ಮಾಡಲಾಗಿದೆ ಎಂದು ಕೇಂದ್ರೀಯ ಅಂಕಿಅಂಶ ಕಾರ್ಯಾಲಯದ ಮುಖ್ಯ ಅಂಕಿಅಂಶಕಾರ ಟಿಸಿಎ ಅನಂದ್ ಹೇಳಿದ್ದಾರೆ. ಅಂದರೆ, ನವೆಂಬರ್ ತಿಂಗಳಲ್ಲಿ ನೋಟುಗಳ ಅಮಾನ್ಯ ಘೋಷಣೆಯ ಬಳಿಕದ ದತ್ತಾಂಶ ಇನ್ನಷ್ಟೇ ಹೊರಬೀಳಬೇಕಿದೆ. ‘‘ಕರೆನ್ಸಿ ನೋಟುಗಳ ಅಮಾನ್ಯ ನಂತರದ ದತ್ತಾಂಶಗಳನ್ನು ಸೇರಿಸಿದರೆ, ಈ ಅಂಕಿಅಂಶದಲ್ಲಿ ಭಾರಿ ಪ್ರಮಾಣದ ಬದಲಾವಣೆ ಆಗುವ ಸಾಧ್ಯತೆಯಿರುವ ಕಾರಣ, ನವೆಂಬರ್‌ನ ಅಂಕಿಅಂಶಗಳನ್ನು ತೆಗೆದುಕೊಳ್ಳದೇ ಇರಲು ನಿರ್ಧರಿಸಲಾಯಿತು,’’ ಎಂಬ ಮಾಹಿತಿಯನ್ನೂ ಅವರು ಹೊರಹಾಕಿದ್ದಾರೆ.
7 ತಿಂಗಳ ಡೇಟಾ:
ರಾಷ್ಟ್ರೀಯ ಆದಾಯದ ಮೊದಲ ಸುಧಾರಿತ ಅಂದಾಜಿನಲ್ಲಿ ನವೆಂಬರ್ ತಿಂಗಳನ್ನು ಬಿಟ್ಟು, ಅದರ ಹಿಂದಿನ 7 ತಿಂಗಳ ಡೇಟಾವನ್ನು ಮಾತ್ರ ತೆಗೆದುಕೊಳ್ಳಲಾಗಿದೆ. 2016-17ರಲ್ಲಿ ನೈಜ ಜಿಡಿಪಿಯು 121.55 ಲಕ್ಷ ಕೋಟಿಯ ಮಟ್ಟವನ್ನು ತಲುಪುವ ಸಾಧ್ಯತೆಯಿದೆ. 2016-17ರಲ್ಲಿ ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ವಲಯವು ಜಿವಿಎ(ಗ್ರಾಸ್ ವ್ಯಾಲ್ಯೂ ಆ್ಯಡೆಡ್)ನಲ್ಲಿ ಶೇ.4.1ರಷ್ಟು ಪ್ರಗತಿ ಸಾಸಲಿದ್ದು, ಹಣಕಾಸು, ವಿಮೆ, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವೆಗಳು ಶೇ.9.0ಯಷ್ಟು ಪ್ರಗತಿ ಕಾಣುವ ನಿರೀಕ್ಷೆಯಿದೆ ಎಂದು ಅಂಕಿ ಅಂಶ ತಿಳಿಸಿದೆ. ಇದು 2015-16ರಲ್ಲಿ ಶೇ.10.3 ಆಗಿತ್ತು.
ಕಾರಣವೇನು?
ಉತ್ಪಾದನೆ, ಗಣಿಗಾರಿಕೆ ಮತ್ತು ನಿರ್ಮಾಣ ವಲಯದಲ್ಲಾದ ಕುಸಿತವೇ ಜಿಡಿಪಿ ಪ್ರಮಾಣ ಕುಸಿಯಲು ಕಾರಣ ಎಂದು ಹೇಳಲಾಗಿದೆ. 2015-16ಕ್ಕೆ ಹೋಲಿಸಿದರೆ ಉತ್ಪಾದನೆ ಮತ್ತು ನಿರ್ಮಾಣ ಚಟುವಟಿಕೆಗಳ ಪ್ರಗತಿಯು ಕ್ರಮವಾಗಿ ಶೇ.7.4 (ಹಿಂದಿನ ಅವಯಲ್ಲಿ ಶೇ.9.3) ಮತ್ತು ಶೇ.2.9 (ಶೇ.3.9)ಕ್ಕೆ ಇಳಿಯಲಿದೆ.
1 ಲಕ್ಷ ದಾಟಲಿದೆ ತಲಾ ಆದಾಯ
ದೇಶದ ಜನರ ಜೀವನಮಟ್ಟವನ್ನು ಅಳೆಯುವ, ತಲಾ ಆದಾಯವು 2016-17ರ ಅವಯಲ್ಲಿ 1 ಲಕ್ಷ ದಾಟುವ ಸಾಧ್ಯತೆಯಿದೆ ಎಂದು ಸರ್ಕಾರ ಹೇಳಿದೆ. ಹಿಂದಿನ ವಿತ್ತೀಯ ವರ್ಷದಲ್ಲಿ ತಲಾ ಆದಾಯವು 93,293 ಆಗಿತ್ತು. ಈಗ ಇದು ಅಂದಾಜು 1,03,007 ಆಗಲಿದೆ ಎಂದು ಕೇಂದ್ರೀಯ ಅಂಕಿಅಂಶ ಕಾರ್ಯಾಲಯ ಮಾಹಿತಿ ನೀಡಿದೆ. ಅಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ದೇಶದ ತಲಾ ಆದಾಯವು ಶೇ.10.4ರಷ್ಟು ಹೆಚ್ಚಳವಾಗಲಿದೆ.
ದೇಶದ ಸಾಮರ್ಥ್ಯವನ್ನು ನೋಟು ಅಮಾನ್ಯ ನೀತಿಯು ಧ್ವಂಸಗೊಳಿಸಿದೆ. ಇದು ಪ್ರಸಕ್ತ ಸಾಲಿನ ಜಿಡಿಪಿಯನ್ನು ಶೇ.1ರಿಂದ 2ರಷ್ಟು ಕಡಿತಗೊಳಿಸಲಿದೆ. ಅಂದರೆ, ಈ ವರ್ಷದಲ್ಲಿ ದೇಶದ ಜಿಡಿಪಿ ಶೇ.5.5ಕ್ಕೆ ಇಳಿಕೆಯಾಗುವ ಸಾಧ್ಯತೆಯಿದೆ.
- ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಯೋಜನಾ ಆಯೋಗದ ಮಾಜಿ ಮುಖ್ಯಸ್ಥ
