ನವದೆಹಲಿ: ಭಾರತ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಮಂಗಳವಾರ ವಿದಾಯ ಘೋಷಿಸಿದ್ದಾರೆ.  ಫೇಸ್‌ಬುಕ್‌ನಲ್ಲಿ ಭಾವನಾತ್ಮಕ ವಿಡಿಯೋವೊಂದರ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಗುರುವಾರದಿಂದ ಆಂಧ್ರಪ್ರದೇಶ ವಿರುದ್ಧ ನಡೆಯಲಿರುವ ರಣಜಿ ಪಂದ್ಯ ಅವರ ವೃತ್ತಿಬದುಕಿನ ಕೊನೆ ಪಂದ್ಯವಾಗಲಿದೆ.

ಡೆಲ್ಲಿ ತಂಡಕ್ಕೆ ರಣಜಿ ಟ್ರೋಫಿ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದ ಗಂಭೀರ್‌, ಟಿ 20 ಹಾಗೂ ಏಕದಿನ ವಿಶ್ವಕಪ್‌ ಫೈನಲ್‌ಗಳಲ್ಲಿ ಅವಿಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡಿ ಭಾರತ ಚಾಂಪಿಯನ್‌ ಆಗಲು ನೆರವಾಗಿದ್ದರು. ಭಾರತ ಟೆಸ್ಟ್‌ನಲ್ಲಿ ಮೊದಲ ಬಾರಿಗೆ ನಂ.1 ಪಟ್ಟಕ್ಕೇರಿದಾಗ ತಂಡದ ಭಾಗವಾಗಿದ್ದ ಅವರು, ಕೋಲ್ಕತಾ ನೈಟ್‌ರೈಡ​ರ್‍ಸ್ ತಂಡವನ್ನು 2 ಬಾರಿ ಐಪಿಎಲ್‌ ಚಾಂಪಿಯನ್‌ ಆಗಿಯೂ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ. ಐಸಿಸಿ ಟೆಸ್ಟ್‌ ಹಾಗೂ ಟಿ20 ಬ್ಯಾಟ್ಸ್‌ಮನ್‌ಗಳ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದ ಗಂಭೀರ್‌, ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿದ್ದಾರೆ.

2003ರಲ್ಲಿ ಭಾರತ ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡಿದ ಅವರು, 2004ರಲ್ಲಿ ಟೆಸ್ಟ್‌ ತಂಡಕ್ಕೂ ಕಾಲಿಟ್ಟರು. 2007ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ಪರ ಮೊದಲ ಬಾರಿಗೆ ಟಿ20 ಪಂದ್ಯವನ್ನಾಡಿದರು. 1999-2000ರ ಋುತುವಿನಲ್ಲಿ ಅವರು ದೆಹಲಿ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

ಬಿಜೆಪಿ ಸೇರ್ತಾರಾ ಗಂಭೀರ್‌?

ಗೌತಮ್‌ ಗಂಭೀರ್‌ ನಿವೃತ್ತಿ ನಿರೀಕ್ಷಿತ ಎನಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಇತ್ತೀಚಿನ ಚಟುವಟಿಕೆಗಳನ್ನು ನೋಡಿದವರು ಗಂಭೀರ್‌ ರಾಜಕೀಯಕ್ಕೆ ಬರುವ ಹಾಗೆ ಕಾಣಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. 

ಗಂಭೀರ್‌ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಪಡೆದು ದೆಹಲಿಯಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಸಹ ಹರಿಹಾಡುತ್ತಿದೆ. ಸಂಸದೆ ಮೀನಾಕ್ಷಿ ಲೇಖಿ ಬದಲಿಗೆ ಬಿಜೆಪಿ ಗಂಭೀರ್‌ಗೆ ಟಿಕೆಟ್‌ ನೀಡಲು ಆಸಕ್ತಿ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.