ಬೆಂಗಳೂರು (ಆ. 16): ದೇಶದ ಗಮನ ಸೆಳೆದಿದ್ದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ಪ್ರಕಾರವು ಇನ್ಮುಂದೆ ರಾಜ್ಯ ಮತ್ತು ರಾಷ್ಟ್ರೀಯ ಪೊಲೀಸ್‌ ತರಬೇತಿ ಅಕಾಡೆಮಿಗಳಲ್ಲಿ ಶೈಕ್ಷಣಿಕ ಅಧ್ಯಯನ ಗ್ರಂಥವಾಗಲಿದೆ ಎಂಬ ಸಂಗತಿ ತಿಳಿದು ಬಂದಿದೆ.

ಇದರೊಂದಿಗೆ ತಮ್ಮ ತನಿಖೆ ಚತುರತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪುರಸ್ಕಾರ ಹಾಗೂ ಸಮಾಜದ ಅಭಿನಂದನೆಗಳಿಗೆ ಪಾತ್ರರಾಗಿದ್ದ ಗೌರಿ ಹತ್ಯೆ ಪ್ರಕರಣದ ತನಿಖಾ ತಂಡದ ಮುಕುಟಕ್ಕೆ ಮತ್ತೊಂದು ಗರಿಮೆ ಬಂದಿದೆ. ಪೊಲೀಸರ ತರಬೇತಿ ಶಾಲೆಗಳ ಕೋರಿಕೆ ಮೇರೆಗೆ ಅಧ್ಯಯನ ಗ್ರಂಥದ ಸಿದ್ಧತೆಗೆ ಮುಖ್ಯ ತನಿಖಾಧಿಕಾರಿ ಎಂ.ಎನ್‌.ಅನುಚೇತ್‌ ಮುಂದಾಗಿದ್ದಾರೆ.

ಗೌರಿ ಲಂಕೇಶ್‌ ಹತ್ಯೆ ತನಿಖೆ ಮೂಲಕ ರಾಷ್ಟ್ರದಲ್ಲಿ ಗುಪ್ತವಾಗಿ ಬೇರೂರಿದ್ದ ಸೈದ್ಧಾಂತಿಕ ದ್ವೇಷದ ಕೊಲೆಗಡುಕರ ಜಾಲವನ್ನು ಭೇದಿಸುವಲ್ಲಿ ವಿಶೇಷ ತನಿಖಾ ತಂಡ ಯಶಸ್ವಿಯಾಗಿತ್ತು. ಈ ಕೊಲೆ ಬಳಿಕ ರಾಜ್ಯದಲ್ಲಿ ನಡೆದಿದ್ದ ಹಿರಿಯ ಸಂಶೋಧಕ ಡಾ. ಎಂ.ಎಂ. ಕಲ್ಬುರ್ಗಿ ಹಾಗೂ ಮಹಾರಾಷ್ಟ್ರದ ಚಿಂತಕರಾದ ನರೇಂದ್ರ ದಾಬೋಲ್ಕರ್‌ ಮತ್ತು ಗೋವಿಂದ ಪನ್ಸಾರೆ ಅವರ ಹತ್ಯೆಗಳ ಹಿಂದಿನ ರಹಸ್ಯವು ಬಯಲಾಯಿತು. ಈ ಚಿಂತಕರ ಹತ್ಯೆ ಜಾಲವು ಮೊದಲ ಬಾರಿಗೆ ಬಯಲಾಗಿ ದೇಶದ ಸಾರಸ್ವತ ಲೋಕವೇ ಕಂಪಿಸುವಂತೆ ಮಾಡಿತು.

ಹಲವು ತನಿಖಾ ಸಂಸ್ಥೆಗಳಿಗೆ ಸಣ್ಣದೊಂದು ಸುಳಿವು ಸಹ ಸಿಗದೆ ಸವಾಲಾಗಿ ಪರಿಣಮಿಸಿದ್ದ ಗೌರಿ ಲಂಕೇಶ್‌ ಹಂತಕರ ಜಾಡು ಪತ್ತೆ ಹಚ್ಚಲು ಎಸ್‌ಐಟಿ ಭಾರಿ ಕಸರತ್ತು ನಡೆಸಿತ್ತು. ಈ ಶೋಧನಾ ಹಂತದಲ್ಲಿ ಹಲವು ಹೊಸ ಬಗೆಯ ತಂತ್ರಗಾರಿಕೆಯನ್ನು ರೂಪಿಸಿತ್ತು. ಹೀಗಾಗಿ ದೇಶದ ಯಾವುದೇ ತನಿಖಾ ಸಂಸ್ಥೆಗೆ ಗೌರಿ ಪ್ರಕರಣವು ಮಹತ್ವದ್ದಾಗಿದೆ.

ಇದರಿಂದಾಗಿ ಆ ಪತ್ತೆದಾರಿಕೆಯಲ್ಲಿ ಲಭ್ಯವಾದ ಮಾಹಿತಿ ಆಧರಿಸಿ ಅಧ್ಯಯನ ವರದಿ ರಚಿಸಿಕೊಡುವಂತೆ ಮುಖ್ಯ ತನಿಖಾಧಿಕಾರಿ ಅನುಚೇತ್‌ ಅವರಿಗೆ ರಾಜ್ಯ ಮತ್ತು ರಾಷ್ಟ್ರೀಯ ಪೊಲೀಸ್‌ ತರಬೇತಿ ಶಾಲೆಗಳು ಮನವಿ ಮಾಡಿದ್ದವು.

ಈ ಕೋರಿಕೆಗೆ ಸಮ್ಮತಿಸಿದ ಅನುಚೇತ್‌ ಅವರು, ಹಿರಿಯ ಸಂಶೋಧಕ ಡಾ.ಎಂ.ಕಲ್ಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆ ಮುಕ್ತಾಯಗೊಳಿಸಿದ ನಂತರ ಅಧ್ಯಯನ ವರದಿ ಬರವಣಿಗೆ ಆರಂಭಿಸಲಿದ್ದಾರೆ. ಭಾಗಶಃ 2-3 ತಿಂಗಳಲ್ಲಿ ಪೊಲೀಸ್‌ ತರಬೇತಿ ಶಾಲೆಗಳಲ್ಲಿ ಅಧ್ಯಯನಕ್ಕೆ ವರದಿ ಲಭಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಏತಕ್ಕಾಗಿ?

ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್‌ ಹೋಮ್ಸ್‌ ಲೇಔಟ್‌ನಲ್ಲಿ 2017ರ ಸೆಪ್ಟೆಂಬರ್‌ 5 ರಂದು ಗೌರಿ ಲಂಕೇಶ್‌ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಈ ಕೃತ್ಯವನ್ನು ಕೇವಲ ಒಂದು ವ್ಯಕ್ತಿ ಕೊಲೆಯಾಗಿ ಮಾತ್ರ ಪರಿಗಣಿಸುವಂತಿಲ್ಲ. ಇದು ದೇಶದ ಆಂತರಿಕ ಭದ್ರತೆಗೆ ಕಂಟಕವಾಗಿದ್ದ ಸೈದ್ಧಾಂತಿಕ ದ್ವೇಷದ ಜಾಲದ ಬುಡವನ್ನೇ ತುಂಡರಿಸಿದ ತನಿಖೆಯಾಗಿದೆ. ಹೀಗಾಗಿ ಪೊಲೀಸ್‌ ವ್ಯವಸ್ಥೆಯಲ್ಲಿ ಗೌರಿ ಪ್ರಕರಣದ ತನಿಖೆಯೇ ‘ಒಂದು ಮಾದರಿ’ (ಮಾಡಲ್‌)ಯಾಗಿ ದಾಖಲಾಗಿದೆ. ಹೀಗಾಗಿ ಅದರ ಶೈಕ್ಷಣಿಕ ಅಧ್ಯಯನವು ಪೊಲೀಸರಿಗೆ ಅಗತ್ಯವಾಗಿದೆ.

ಗೌರಿ ಹತ್ಯೆ ಪತ್ತೆದಾರಿಕೆಯಲ್ಲಿ ತಂತ್ರಜ್ಞಾನ ಮತ್ತು ಮಾನವ ಶಕ್ತಿಯನ್ನು ನೈಪುಣ್ಯತೆಯಿಂದ ವಿನಿಯೋಗಿಸಲಾಗಿತ್ತು. ಹತ್ಯೆ ನಡೆದ ಹಿಂದಿನ ಮತ್ತು ಮರುದಿನ ಸೇರಿ ಮೂರು ದಿನಗಳ ಕಾಲ ರಾಜ್ಯ ವ್ಯಾಪ್ತಿ ಹಾಗೂ ಬೆಂಗಳೂರು ನಗರ ಒಂದು ತಿಂಗಳಲ್ಲಿ ಸಂಪರ್ಕ ಹೊಂದಿದ್ದ ಅಂದಾಜು .1.5 ಕೋಟಿಗೂ ಅಧಿಕ ಮೊಬೈಲ್‌ ಕರೆಗಳನ್ನು ಪರಿಶೀಲಿಸಲಾಗಿತ್ತು. ಅಸಂಖ್ಯಾತ ಜನರನ್ನು ವಿಚಾರಣೆ ನಡೆಸಲಾಗಿತ್ತು. ತಿಂಗಳುಗಟ್ಟಲೇ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಹಂತಕರನ್ನು ನೆರಳಿನಂತೆ ಹಿಂಬಾಲಿಸಿ ಎಸ್‌ಐಟಿ ಸೆರೆ ಹಿಡಿದಿತ್ತು.

ತಾಂತ್ರಿಕತೆ ಬಳಸಿಕೊಂಡೇ ಪಕ್ಕಾ ಪೊಲೀಸಿಂಗ್‌ ಮೂಲಕ ಕಾರ್ಯಾಚರಣೆ ನಡೆಸಿದಾಗ ಫಲಿತಾಂಶ ಲಭ್ಯವಾಗಿತ್ತು. ಆಗ ಬಲಪಂಥೀಯ ವಿರೋಧಿಗಳ ಹತ್ಯೆ ಜಾಲದ ಪ್ರಧಾನ ಸಂಚುಕೋರ ಮಹಾರಾಷ್ಟ್ರದ ಅಮೋಲ್‌ ಕಾಳೆ ತಂಡ ಸಿಕ್ಕಿಬಿತ್ತು. ಹಾಗೆಯೇ ಗೋವಾ ಮತೀಯ ಸಂಘಟನೆಯೊಂದರ ಕೈವಾಡವು ಬಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

- ಗಿರೀಶ್ ಮಾದೇನಹಳ್ಳಿ