Asianet Suvarna News Asianet Suvarna News

ಗೌರಿ ಲಂಕೇಶ್‌ಗೆ ಒಲಿಯಿತು ಪ್ರತಿಷ್ಠಿತ ಗೌರವ

ಹತ್ಯೆಗೀಡಾದ ಭಾರತದ ಪತ್ರಕರ್ತರಾದ ಗೌರಿ ಲಂಕೇಶ್‌ ಹಾಗೂ ಸುದೀಪ್‌ ದತ್ತ ಭೌಮಿಕ್‌ ಅವರಿಗೆ ಅಮೆರಿಕದಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಹೋರಾಡುವ ವಸ್ತುಸಂಗ್ರಹಾಲಯವೊಂದರಿಂದ ಪ್ರತಿಷ್ಠಿತ ಗೌರವ ಲಭಿಸಿದೆ. 

Gauri Lankesh, Sudip Dutta Bhaumik, Among Journalists, Honoured At Washington Event

ವಾಷಿಂಗ್ಟನ್‌ :  ಹತ್ಯೆಗೀಡಾದ ಭಾರತದ ಪತ್ರಕರ್ತರಾದ ಗೌರಿ ಲಂಕೇಶ್‌ ಹಾಗೂ ಸುದೀಪ್‌ ದತ್ತ ಭೌಮಿಕ್‌ ಅವರಿಗೆ ಅಮೆರಿಕದಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಹೋರಾಡುವ ವಸ್ತುಸಂಗ್ರಹಾಲಯವೊಂದರಿಂದ ಪ್ರತಿಷ್ಠಿತ ಗೌರವ ಲಭಿಸಿದೆ. ಗೌರಿ ಹಾಗೂ ಭೌಮಿಕ್‌ ಸೇರಿದಂತೆ ದೇಶ-ವಿದೇಶದ 18 ಹತ್ಯೆಯಾದ ಪತ್ರಕರ್ತರ ಹೆಸರುಗಳನ್ನು ಸಂಸ್ಥೆಯ ಸ್ಮಾರಕದಲ್ಲಿ ಸೇರಿಸಲಾಗಿದೆ.

ಪ್ರತಿ ವರ್ಷ ‘ನ್ಯೂಸಿಯಂ’ ಹೆಸರಿನ ಈ ಮಾಧ್ಯಮ ವಸ್ತುಸಂಗ್ರಹಾಲಯವು ಹತ್ಯೆಗೆ ಈಡಾದ ಪತ್ರಕರ್ತರ ಹೆಸರುಗಳನ್ನು ತಾನು ಸ್ಥಾಪಿಸಿರುವ ಸ್ಮಾರಕದಲ್ಲಿ ಸೇರಿಸುತ್ತದೆ. ಈ ವರ್ಷವೂ ಇದನ್ನು ಮುಂದುವರಿಸಲಾಗಿದೆ. 18 ಪತ್ರಕರ್ತರ ಪೈಕಿ 8 ಮಂದಿ ಮಹಿಳಾ ಪತ್ರಕರ್ತರು ಈ ಸಲದ ಪಟ್ಟಿಯಲ್ಲಿದ್ದಾರೆ. ‘ಹಿಂದೂ ಮೂಲಭೂತವಾದ ಹಾಗೂ ಜಾತಿ ಪದ್ಧತಿ ವಿರುದ್ಧ 55 ವರ್ಷದ ಗೌರಿ ಲಂಕೇಶ್‌ ಭಾರತದೆಲ್ಲೆಡೆ ಹೋರಾಡಿದ್ದರು’ ಎಂದು ಅವರ ಹೆಸರಿನ ಮುಂದೆ ಬರೆಯಲಾಗಿದೆ.

‘ಗೌರಿ ಲಂಕೇಶ್‌ ಅವರು ಗೌರಿ ಲಂಕೇಶ್‌ ಪತ್ರಿಕೆ ನಿಯತಕಾಲಿಕೆಯ ಸಂಪಾದಕಿಯಾಗಿದ್ದರು. ಕಾರ್ಯಕರ್ತೆಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ರಾಷ್ಟ್ರೀಯವಾದದ ಅಜೆಂಡಾದ ಟೀಕಾಕಾರರಾಗಿದ್ದರು. ಅವರ ಹತ್ಯೆ ದೇಶಾದ್ಯಂತ ಆಕ್ರೋಶ ಎಬ್ಬಿಸಿತು. ಅವರ ಹತ್ಯೆಗೆ ಸಂಬಂಧಿಸಿ ಈವರೆಗೆ ಓರ್ವನನ್ನು ಬಂಧಿಸಲಾಗಿದೆ’ ಎಂದೂ ಉಲ್ಲೇಖಿಸಲಾಗಿದೆ. ಗೌರಿ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದ ಸ್ವಗೃಹದಲ್ಲಿ 2017ರ ಸೆ.5ರಂದು ಹತ್ಯೆಗೀಡಾಗಿದ್ದರು.

ಇನ್ನು ಸುದೀಪ್‌ ದತ್ತ ಭೌಮಿಕ್‌ ಅವರು ಅರೆಸೇನೆಯಲ್ಲಿನ ಅವ್ಯವಹಾರ ಬೆಳಕಿಗೆ ತಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ಅರೆಸೇನಾ ಅಧಿಕಾರಿಯೊಬ್ಬರಿಗೂ ಭೌಮಿಕ್‌ ಅವರಿಗೂ ಜಗಳವಾಗಿತ್ತು. ಆಗ ತಮ್ಮ ಅಂಗರಕ್ಷಕನಿಗೆ ಭೌಮಿಕ್‌ ಮೇಲೆ ಗುಂಡು ಹಾರಿಸಲು ಅರೆಸೇನಾಧಿಕಾರಿ ಸೂಚನೆ ನಿಡಿದ್ದರು. 2017ರ ನ.21ರಂದು ಭೌಮಿಕ್‌ ಹತ್ಯೆ ನಡೆದಿತ್ತು. ಅವರ ಹೆಸರನ್ನೂ ನ್ಯೂಸಿಯಂನಲ್ಲಿ ನಮೂದಿಸಲಾಗಿದೆ.

Follow Us:
Download App:
  • android
  • ios