ಮಗ ನಿರಪರಾಧಿ, ಕರೆದುಕೊಂಡು ಬನ್ನಿ

Gauri Lankesh Murder Accused Parashuram Wagmore Father Reacts
Highlights

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಶಂಕಿತ ಆರೋಪಿ ಸಿಂದಗಿಯ ಪರಶುರಾಮ ವಾಗ್ಮೋರೆ ಅವರ ತಾಯಿ - ತಂದೆಯರು ತಮ್ಮ ಮಗ ನಿರಪರಾಧಿ ಎಂದು ಹೇಳಿದ್ದಾರೆ. 

ವಿಜಯಪುರ :  ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಶಂಕಿತ ಆರೋಪಿ ಸಿಂದಗಿಯ ಪರಶುರಾಮ ವಾಗ್ಮೋರೆ ಅವರ ತಾಯಿ ಜಾನಕಿಬಾಯಿ ಅಸ್ವಸ್ಥರಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ನಿರಪರಾಧಿಯಾದ ತಮ್ಮ ಮಗನನ್ನು ಕರೆದುಕೊಂಡು ಬರದಿದ್ದಲ್ಲಿ ನಾವು ಆತ್ಮಹತ್ಯೆಗೆ ಶರಣಾಗಬೇಕಾಗುತ್ತದೆ ಎಂದು ಪರಶುರಾಮ ತಂದೆ ಅಶೋಕ ವಾಗ್ಮೋರೆ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪುತ್ರ ಅಂಥವನಲ್ಲ. ಅವನ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿದೆ ಎಂದು ಹೇಳಿದರು.

ಪುತ್ರ ಪರಶುರಾಮ ಬಂಧಿತನಾದ ಬಳಿಕ ನನ್ನ ಪತ್ನಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾಗಿ, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾಳೆ. ನನ್ನ ಪತ್ನಿ ಕಡಿಮೆ ರಕ್ತದೊತ್ತಡದಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಬೇಗನೆ ನನ್ನ ಮಗನನ್ನು ಕರೆದುಕೊಂಡು ಬರಬೇಕು. ಇಲ್ಲದಿದ್ದರೆ ನಾವು ಆತ್ಮಹತ್ಯೆಗೆ ಶರಣಾಗಬೇಕಾಗುತ್ತದೆ ಎಂದು ಅಶೋಕ ಎಚ್ಚರಿಸಿದ್ದಾರೆ.

ಮಗಳ ಮದುವೆಯಾಗಿದೆ. ಪತ್ನಿಗೆ ಕಡಿಮೆ ರಕ್ತದೊತ್ತಡವಿದೆ. ಮಗನ ಸುದ್ದಿ ಕೇಳಿದ ನಂತರ ಪತ್ನಿ ಜಾನಕಿಬಾಯಿ ಆಗಾಗ ಅಸ್ವಸ್ಥರಾಗುತ್ತಿದ್ದಾರೆ. ನನ್ನ ಮಗ ಪರಶುರಾಮನನ್ನು ಬಿಟ್ಟರೆ ನಮಗೆ ಬೇರೆ ಜಗತ್ತು ಇಲ್ಲ. ಅವನೇ ನಮಗೆ ಜೀವನಾಧಾರವಾಗಿದ್ದ. ಕಳೆದ 9 ತಿಂಗಳಿಂದ ಮನೆ ಬಾಡಿಗೆ ಕೂಡ ನೀಡಿಲ್ಲ. ಇಂತಹ ಆರ್ಥಿಕ ಸಂಕಟದಲ್ಲಿ ತಾವು ಇದ್ದೇವೆ. ಮಗನನ್ನು ಪೊಲೀಸರು ಕರೆದುಕೊಂಡು ಹೋದ ಮೇಲೆ ನಮ್ಮ ಕೈ, ಕಾಲು ಆಡುತ್ತಿಲ್ಲ. ಊಟ, ನಿದ್ರೆ ರುಚಿಸುತ್ತಿಲ್ಲ ಎಂದು ಅಶೋಕ ಅಳಲು ತೋಡಿಕೊಂಡರು.

ಗೌರಿ ಹತ್ಯೆ ದಿನ ಸುನಿಲ್‌ ಮನೆಯಲ್ಲೇ ಇದ್ದ

ಗೌರಿ ಹತ್ಯೆ ಶಂಕಿತ ಆರೋಪಿ ಪರಶುರಾಮನ ಜತೆಗೆ ವಶಕ್ಕೆ ಪಡೆದಿದ್ದಾರೆ ಎನ್ನಲಾದ ಸಿಂದಗಿಯ ಸುನೀಲ್‌ ಅಗಸರನ ತಾಯಿ ನಂದವ್ವ ಈ ರೀತಿಯಾಗಿ ಮಗನನ್ನು ಈ ರೀತಿ ಸಮರ್ಥಿಸಿಕೊಂಡಿದ್ದಾರೆ.

ಗೌರಿ ಲಂಕೇಶ್‌ ಹತ್ಯೆ ನಡೆದ ದಿನ ನನ್ನ ಮಗ ಮನೆಯಲ್ಲಿಯೇ ಇದ್ದ. ಆತ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಪೊಲೀಸರು ನನ್ನ ಮಗನನ್ನು ವಿನಾಕಾರಣ ಈ ಪ್ರಕರಣದಲ್ಲಿ ಎಳೆದಿದ್ದಾರೆ ಎಂದು ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ನಂದವ್ವ ಹೇಳಿದ್ದಾಳೆ.

ಬುಧವಾರ ಸಿಂದಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಮಗ ದಿನಂಪ್ರತಿ ಬಟ್ಟೆಇಸ್ತ್ರಿ ಮಾಡಿಕೊಂಡಿದ್ದ. ನಮ್ಮದು ಲಾಂಡ್ರಿ ಇತ್ತು. ಬಟ್ಟೆಇಸ್ತ್ರಿ ಮಾಡುವುದಷ್ಟೇ ಅಲ್ಲದೆ, ಬಟ್ಟೆಒಗೆದು ಇಸ್ತ್ರಿ ಮಾಡಿಯೂ ಕೊಡುತ್ತಿದ್ದೆವು. ನನ್ನ ಮಗ ಸುನೀಲ ಮನೆಯಲ್ಲಿಯೇ ಇಸ್ತ್ರಿ ಮಾಡಿಕೊಂಡಿದ್ದ. ಆತ ಗೌರಿ ಲಂಕೇಶ್‌ ಹತ್ಯೆ ನಡೆದ ದಿನ ಸಿಂದಗಿಯ ತಮ್ಮ ಮನೆಯಲ್ಲಿಯೇ ಇದ್ದ ಎಂದು ಹೇಳಿದ್ದಾಳೆ.

loader