ಹುಣ್ಣಿಮೆ ಬೆಳದಿಂಗಳಲ್ಲಿ ತಣ್ಣಗಿದ್ದ ಸಿಲಿಕಾನ್ ಸಿಟಿಯನ್ನೇ ಇದ್ದಕ್ಕಿದ್ದಂತೆ ಬೆಚ್ಚಿ ಬೀಳಿಸಿದ್ದು ಗೌರಿ ಲಂಕೇಶ್ ಅವರ ಹತ್ಯೆ. ತಮ್ಮ ವಿಚಾರವಾದದ ಮೂಲಕವೇ ಅನೇಕರ ವಿರೋಧ ಕಟ್ಟಿಕೊಂಡಿದ್ದ ಗೌರಿ ಲಂಕೇಶ್ ಇನ್ನಿಲ್ಲ. ಇಬ್ಬರು ನಕ್ಸಲರನ್ನ ಪ್ರಮುಖ ವಾಹಿನಿಗೆ ತಂದಿದ್ದವರ ಎದೆಗೆ ಗುಂಡಿಟ್ಟು ಬಲಿತೆಗೆದುಕೊಂಡಿದ್ದಾರೆ ನರ ಹಂತಕರು.
ಬೆಂಗಳೂರು(ಸೆ.06): ಅದಾಗ ತಾನೆ ತನ್ನ ಕೆಲಸ ಮುಗಿಸಿ, ಕಚೇರಿಯಿಂದ ಮನೆಗೆ ವಾಪಸ್ಸಾದ ಗೌರಿ ಲಂಕೇಶ್, ತಮ್ಮ ಮನೆ ಬಾಗಿಲು ತಲುಪೇ ಇಲ್ಲ. ಅಷ್ಟರಲ್ಲಾಗಲೇ ಆಕೆಯನ್ನು ಹಿಂಬಾಲಿಸಿ ಬಂದಿದ್ದ ದುಷ್ಕರ್ಮಿಗಳ ಗುಂಡೇಟಿಗೆ, ಗೌರಿ ಲಂಕೇಶ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ರಾತ್ರಿ 08 ರ ಸುಮಾರಿಗೆ ಈ ಘಟನೆ ನಡೆದಿದ್ದು, ಮುಸುಕುದಾರಿ ಹಂತಕರು 7 ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಮೂರು ಗುಂಡು ಗೌರಿ ಲಂಕೇಶ್ ದೇಹ ಸೇರಿದ್ರೆ, ಇನ್ನುಳಿದ ನಾಲ್ಕು ಗುಂಡು ಗೋಡೆತಾಕಿವೆ. ಗುಂಡೇಟಿಗೆ ಗೌರಿ ಲಂಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಲೆಗೆ ಕಂಟ್ರಿ ಪಿಸ್ತೂಲನ್ನ ಬಳಸಿದ್ದು, 0.35 MM ಬುಲೆಟ್ ಗೌರಿ ಲಂಕೇಶ್ ದೇಹ ಹೊಕ್ಕಿದೆ. ಇನ್ನೂ ವಿಷಯ ತಿಳಿದ ಕೂಡಲೆ ಸ್ಥಳಕ್ಕಾಗಮಿಸಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಯಾವ ಕಾರಣಕ್ಕೆ ಅವರ ಹತ್ಯೆಯಾಗಿದೆ ಎಂಬುದು ಗೊತ್ತಿಲ್ಲ. ಆದಷ್ಟು ಬೇಗ ಹಂತಕರನ್ನ ಪತ್ತೇ ಹಚ್ತೀವಿ ಎಂದಿದ್ದಾರೆ.
ಇನ್ನೂ ಸಿಎಂ ಸಿದ್ದರಾಮಯ್ಯ ಕೂಡ ಗೌರಿ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ್ದು, ಗೌರಿ ಲಂಕೇಶ್ ಹತ್ಯೆ ನಿಜಕ್ಕೂ ಶಾಕಿಂಗ್ ನ್ಯೂಸ್, ದುಃಖಕರ ಸಂಗತಿ. ಗೌರಿ ಲಂಕೇಶ್ ಜಾತ್ಯಾತೀತ ತತ್ವಗಳಲ್ಲಿನ ನಂಬಿಕೆ ಇಟ್ಟಿದ್ದರು. ಅವರದ್ದು ಸಮಾಜಮುಖಿ ವ್ಯಕ್ತಿತ್ವ ಎಂದಿದ್ದಾರೆ.
ಮೂರು ತಿಂಗಳ ಹಿಂದೆಯೆ ಗೌರಿ ಲಂಕೇಶ್ ಗೆ ಕೊಲೆ ಬೆದರಿಕೆ ಬಂದಿದ್ದು, ತಮ್ಮ ಆಪ್ತರ ಬಳಿ ಈ ವಾಚಾರವನ್ನ ಹಂಚಿಕೊಂಡಿದ್ದಾರೆ. ಆದ್ರೆ ಯಾವುದೇ ರೀತಿಯ ಸೆಕ್ಯೂರಿಟಿಯನ್ನ ಪಡೆಯುವ ಪ್ರಯತ್ನ ಮಾಡಿರಲಿಲ್ಲ. ಏಕಾಂಗಿಯಾಗಿಯೇ ತಮ್ಮ ಕಾರ್ಯ ನಿರ್ವಹಿಸ್ತಿದ್ದ ಗೌರಿ ಲಂಕೇಶರ ಚಟುವಟಿಕೆಗಳನ್ನ, ಕೂಲಂಕುಷವಾಗಿ ಅರಿತವರೇ ಇಂದು ಗೌರಿ ಲಂಕೇಶ್ ಹತ್ಯೆಗೆ ಕಾರಣ ವಾಗಿದ್ದಾರೆ.
ಸಧ್ಯ ತೀವ್ರ ತನಿಖೆ ಕೈಗೊಂಡಿರುವ ಪೊಲೀಸರು, ಅನುಮಾನಾಸ್ಪದ ವಾಹನ ಮತ್ತು ವ್ಯಕ್ತಿಗಳ ಪರಿಶೀಲನೆ ನಡೆಸ್ತಿದ್ದಾರೆ. ಇನ್ನೊಂದೆಡೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಹೋರಾಟಗಳು ತೀವ್ರವಾಗಿವೆ.
