ಗೌರಿ ಲಂಕೇಶ್ ಅವರಿಗೆ ಜೀವ ಬೆದರಿಕೆ ಇರುವ ವಿಷಯ ತಮಗಾಗಲೀ, ಪೊಲೀಸರಿಗಾಗಲೀ ಗಮನಕ್ಕೆ ಬಂದಿರಲಿಲ್ಲ. ಅವರೂ ಕೂಡ ಯಾವತ್ತೂ ತಮಗೆ ರಕ್ಷಣೆ ಕೋರಿದ್ದಿಲ್ಲ. ಹೀಗಾಗಿ ಅವರಿಗೆ ಯಾವ ಪೊಲೀಸ್ ಭದ್ರತೆ ಒದಗಿಸಿರಲಿಲ್ಲ, ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು(ಸೆ. 05): ಗೌರಿ ಲಂಕೇಶ್ ಅವರಿಗೆ ಈ ಮುಂಚೆಯೇ ತಮ್ಮ ಹತ್ಯೆಯ ಮುನ್ಸೂಚನೆ ಸಿಕ್ಕಿತ್ತಾ? ಯಾರೋ ಅಪರಿಚತ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ ತಮ್ಮ ಮೇಲೆ ಕೊಲೆ ಬೆದರಿಕೆ ಹಾಕಿದ್ದ ವಿಚಾರವನ್ನು ಗೌರಿ ಲಂಕೇಶ್ ಅವರು ತಮ್ಮ ಆಪ್ತೆ ಹಾಗೂ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅವರಲ್ಲಿ ಹೇಳಿಕೊಂಡಿದ್ದರೆನ್ನಲಾಗಿದೆ. ನಿನ್ನನ್ನು ಉಳಿಸಲ್ಲ, ಸಾಯಿಸ್ತೀನಿ ಎಂದು ಆ ವ್ಯಕ್ತಿ ಹೆದರಿಸಿದ್ದನಂತೆ. ಅಷ್ಟೇ ಅಲ್ಲ, ಗೌರಿ ಲಂಕೇಶ್ ತಮಗೆ ಫೋನ್ ಮಾಡಿ ಮನೆಗೆ ಬಂದು ಭೇಟಿಯಾಗುವುದಾಗಿ ಹೇಳಿದ್ದರೆಂದು ನೂತನ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಗೌರಿ ಲಂಕೇಶ್ ಅವರ ಪಾರ್ಥಿವ ಶರೀರ ಸಾಗಿಸಲಾದ ವಿಕ್ಟೋರಿಯಾ ಆಸ್ಪತ್ರೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ರಾಮಲಿಂಗರೆಡ್ಡಿಯವರು, ತಮಗೆ ಗೌರಿಯವರಿಂದ ಯಾವ ಕಾರಣಕ್ಕೆ ಫೋನ್ ಕರೆ ಬಂದಿತೆಂದು ಗೊತ್ತಿಲ್ಲವೆಂದಿದ್ದಾರೆ. "ಫೋನ್ ಮಾಡಿದ್ದರು.. ಸಿಗಬೇಕಿತ್ತು.. ಮನೆಗೆ ಬರುತ್ತೇನೆ ಎಂದಿದ್ದರು.. ನಾನು ಮನೆಯಲ್ಲಿಲ್ಲ ಎಂದು ಹೇಳಿದೆ. ಸೋಮವಾರ ಮನೆಗೆ ಬಂದು ಭೇಟಿಯಾಗುತ್ತೇನೆ ಎಂದಿದ್ದರು," ಎಂದು ರಾಮಲಿಂಗರೆಡ್ಡಿ ತಿಳಿಸಿದ್ದಾರೆ. ಗೌರಿ ಲಂಕೇಶ್ ತಮಗೆ ಹಲವು ಕಾಲದಿಂದ ಪರಿಚಿತರಾಗಿದ್ದರಿಂದ ಆಗಾಗ್ಗ ಭೇಟಿಯಾಗುತ್ತಿರುತ್ತೇವೆ. ಈ ಫೋನ್ ಕರೆಯನ್ನು ವಿಶೇಷವಾಗಿ ಪರಿಗಣಿಸಲು ಸಾಧ್ಯವಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಗೌರಿ ಲಂಕೇಶ್ ಅವರಿಗೆ ಜೀವ ಬೆದರಿಕೆ ಇರುವ ವಿಷಯ ತಮಗಾಗಲೀ, ಪೊಲೀಸರಿಗಾಗಲೀ ಗಮನಕ್ಕೆ ಬಂದಿರಲಿಲ್ಲ. ಅವರೂ ಕೂಡ ಯಾವತ್ತೂ ತಮಗೆ ರಕ್ಷಣೆ ಕೋರಿದ್ದಿಲ್ಲ. ಹೀಗಾಗಿ ಅವರಿಗೆ ಯಾವ ಪೊಲೀಸ್ ಭದ್ರತೆ ಒದಗಿಸಿರಲಿಲ್ಲ, ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.
ಇನ್ನು, ಗೌರಿ ಲಂಕೇಶ್ ಹತ್ಯೆಗೂ ಎಂಎಂ ಕಲಬುರ್ಗಿ ಹತ್ಯೆಗೂ ಸಾಮ್ಯತೆ ಇದೆಯಾದರೂ ಈ ಹಂತದಲ್ಲಿ ಯಾವುದನ್ನೂ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದು ಈ ವೇಳೆ ರಾಮಲಿಂಗಾ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
