ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಪ್ರಗತಿಪರ ಸಂಘಟನೆಗಳ ಒಗ್ಗಟ್ಟಾಗಿದ್ದು, ಭಾರೀ ಮಟ್ಟದ ಹೋರಾಟಕ್ಕೆ ರೆಡಿಯಾಗಿದ್ದಾರೆ. ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲೂ ಸರಣಿ ಸಭೆ ನಡೆಸಲು ಪ್ರಗತಿಪರ ಮುಖಂಡರು ನಿರ್ಧರಿಸಿದ್ದಾರೆ. ಗೌರಿ ಹಂತಕರು ಸಿಗೋವರೆಗೂ ನಿರಂತರ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ.
ಬೆಂಗಳೂರು(ಸೆ. 07): ವಿಚಾರವಾದಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಂತರ ಪ್ರಗತಿಪರ ಸಂಘಟನೆಗಳು ದೊಡ್ಡ ಮಟ್ಟದ ಹೋರಾಟಕ್ಕೆ ಸಜ್ಜಾಗಿವೆ. ಹತ್ಯೆಯಾದ ದಿನವೇ ಹಲವು ಸಂಘಟನೆಗಳ ಮುಖಂಡರು ಬೆಂಗಳೂರಿನ ಟೌನ್'ಹಾಲ್ ಬಳಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದರು. ತಕ್ಷಣ ಹಂತಕರನ್ನು ಬಂಧಿಸಬೇಕು ಅಂತಾ ಆಗ್ರಹಿಸಿದ್ದರು. ಆದ್ರೆ ಇದು ಇಷ್ಟಕ್ಕೆ ನಿಲ್ಲದೇ, ಗೌರಿ ಹತ್ಯೆ ಹಂತಕರು ಸಿಗುವವರೆಗೂ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.
ಅಸ್ತಿತ್ವಕ್ಕೆ ಬಂತು ಗೌರಿ ಬಳಗ:
ಗೌರಿ ಲಂಕೇಶ್ ಹತ್ಯೆ ಬೆನ್ನಲ್ಲೇ ಪ್ರಗತಿಪರ ಸಂಘಟನೆಗಳು ಗೌರಿ ಬಳಗವನ್ನು ಅಸ್ತಿತ್ವಕ್ಕೆ ತಂದಿವೆ. ಗೌರಿ ಬಳಗದ ಮೂಲಕ ದೆಹಲಿ ಸೇರಿದಂತೆ ರಾಜ್ಯ, ಜಿಲ್ಲಾ ಮಟ್ಟಗಳಲ್ಲೂ ನಿರಂತರ ಸರಣಿ ಪ್ರತಿಭಟನೆ ಸಭೆ ನಡೆಸಲು ನಿರ್ಣಯಿಸಿವೆ. ರವೀಂದ್ರ ಕಲಾಕ್ಷೇತ್ರದ ಸಭಾಂಗಣದಲ್ಲಿ ಅನೌಪಚಾರಿಕ ಸಭೆ ನಡೆಸಿದ ಪ್ರಗತಿಪರ ಸಂಘಟನೆಗಳ ಮುಖಂಡರು, ನಿರಂತರವಾಗಿ ಸರಣಿ ಪ್ರತಿಭಟನೆ ಸಭೆಗಳನ್ನು ನಡೆಸುವ ಪ್ರಸ್ತಾಪವನ್ನು ಮಂಡಿಸಿದರು. ಸೆಪ್ಟಂಬರ್ 12ಕ್ಕೆ ಬೃಹತ್ ಜನಾಂದೋಲನ ನಡೆಸುವ ಸಾಧ್ಯತೆ ಇದೆ.
ಗೌರಿ ಲಂಕೇಶ್ ಅವರ ಒಡನಾಡಿ ಜನಶಕ್ತಿಯ ಡಾ.ವಾಸು, ಕೋಮು ಸೌಹಾರ್ದ ವೇದಿಕೆಯ ಕೆ.ಎಲ್.ಅಶೋಕ್, ಮಾವಳ್ಳಿ ಶಂಕರ್, ಜಿ.ಎನ್.ನಾಗರಾಜ್, ಚುಕ್ಕಿ ನಂಜುಂಡಸ್ವಾಮಿ, ರವಿಕೃಷ್ಣಾರೆಡ್ಡಿ, ಕೆ.ನೀಲಾ ಸೇರಿದಂತೆ ದಲಿತ, ಎಡಪಂಥೀಯ ಸಂಘಟನೆಗಳು, ಮತ್ತಿತರ ಪ್ರಗತಿಪರ ಸಂಘಟನೆಗಳ ಮುಖಂಡರು ಅನೌಪಚಾರಿಕ ಸಭೆಯಲ್ಲಿ ಭಾಗವಹಿಸಿದ್ದರು. ಗೌರಿ ಹಂತಕರು ಸಿಗೋವರೆಗೂ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ದೆಹಲಿಯಲ್ಲಿ ಯೋಗೇಂದ್ರನಾಥ್ ನೇತೃತ್ವದಲ್ಲಿ ಹೋರಾಟ:
ಗೌರಿ ಹತ್ಯೆ ಖಂಡಿಸಿ ದೆಹಲಿಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲು ನಿರ್ಧರಿಸಲಾಗಿದೆ. ಸ್ವರಾಜ್ ಅಭಿಯಾನದ ಯೋಗೇಂದ್ರನಾಥ್ ಗೌರಿ ಒಡನಾಡಿಗಳೊಂದಿಗೆ ದೂರವಾಣಿ ಮೂಲಕ ಈ ಬಗ್ಗೆ ಚರ್ಚಿಸಿದ್ದಾರೆ. ಈ ಕುರಿತು ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಔಪಚಾರಿಕ ಸಭೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ.
ಒಟ್ಟಿನಲ್ಲಿ ಗೌರಿ ಹತ್ಯೆ ವಿರುದ್ಧ ಹೋರಾಟಕ್ಕೆ ಇಡೀ ಎಡಪಂಥೀಯ ಮತ್ತು ಪ್ರಗತಿಪರ ಸಂಘಟನೆಗಳು ಒಗ್ಗಟ್ಟಾಗಿವೆ. ಹಂತಕರನ್ನು ಪತ್ತೆ ಹಚ್ಚೋವರೆಗೂ ಹೋರಾಟ ನಿಲ್ಲಿಸದಿರಲು ನಿರ್ಣಯಿಸಿದ್ದು, ಭಾರೀ ಹೋರಾಟದ ಮುನ್ಸೂಚನೆ ನೀಡಿದ್ದಾರೆ.
- ಬ್ಯೂರೋ ರಿಪೋರ್ಟ್, ಸುವರ್ಣನ್ಯೂಸ್
