ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಗ್ಯಾಸ್‌ ಟ್ಯಾಂಕರ್‌ ಪಲ್ಟಿಆಗಿ ಗ್ಯಾಸ್‌ ಸೋರಿಕೆಯಾದ ಹಿನ್ನೆಲೆಯಲ್ಲಿ ವಾಹನಗಳು ಮುಂದೆ ಚಲಿಸಲಾಗದೇ ಸುಮಾರು 7 ಕಿ.ಮಿ ಟ್ರಾಫಿಲ್ ಜಾಂ ಸಮಸ್ಯೆಯನ್ನು ನಿಪ್ಪಾಣಿಯಲ್ಲಿ ಜನರು ಎದುರಿಸಬೇಕಾಯ್ತು.

ನಿಪ್ಪಾಣಿ: ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಗ್ಯಾಸ್‌ ಟ್ಯಾಂಕರ್‌ ಪಲ್ಟಿಆಗಿ ಗ್ಯಾಸ್‌ ಸೋರಿಕೆಯಾದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಸ್ತವನಿಧಿ ಬಳಿ ಶುಕ್ರವಾರ ಸಂಜೆ ನಡೆದಿದೆ. ಗ್ಯಾಸ್‌ ಸೋರಿಕೆಯಾಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 3 ಗಂಟೆಗಳಿಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಪರಿಣಾಮ ಘಾಟ್‌ನ ಎರಡೂ ಬದಿ ಸುಮಾರು 7 ಕಿ.ಮೀ. ವರೆಗೂ ವಾಹನಗಳು ಸಾಲುಗಟ್ಟಿನಿಂತಿದ್ದವು.

ಕೇರಳದ ಕೊಚ್ಚಿನ್‌ದಿಂದ ಪ್ರೋಪೋಲಿನ್‌ ಗ್ಯಾಸ್‌ ತುಂಬಿದ್ದ ಟ್ಯಾಂಕರ್‌ 3 ದಿನಗಳ ಹಿಂದೆ ಹೊರಟ್ಟಿದ್ದ ಟ್ಯಾಂಕರ್‌ ಶುಕ್ರವಾರ ಸಂಜೆ 6 ಗಂಟೆಗೆ ನಿಪ್ಪಾಣಿ ತಾಲೂಕಿನ ಸ್ತವನಿಧಿ ಘಾಟ್‌ನತ್ತ ಬರುತ್ತಿದ್ದಾಗ, ಇಳಿಜಾರಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಅಲ್ಲಿಯೇ ಟ್ಯಾಂಕರ್‌ ಪಲ್ಟಿಯಾಗಿದೆ. 

ಈ ವೇಳೆ ಗಾಯಗೊಂಡ ಟ್ಯಾಂಕರ್‌ ಚಾಲಕ ರಣಜಿತ್‌ ಸಿಂಗ್‌ (40) ಮತ್ತು ಕ್ಲೀನರ್‌ ಜಿತೇಂದ್ರ ಶರ್ಮಾ(30)ನನ್ನು ಪ್ರವಾಸಿಗರು ಆಸ್ಪತ್ರೆಗೆ ದಾಖಲಿಸಲಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದು, ರಾತ್ರಿ 8.30ರ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

(ಸಾಂದರ್ಬಿಕ ಚಿತ್ರ)