ಹಳ್ಳಿಗಳಲ್ಲೂ ಮನೆ-ಮನೆಯಿಂದ ಕಸ ಸಂಗ್ರಹಿಸಿ, ವೈಜ್ಞಾನಿಕ ವಿಲೇವಾರಿ ಮಾಡಲು ‘ಸುಸ್ಥಿರ ಘನ ತ್ಯಾಜ್ಯ ವಿಲೇವಾರಿಗೆ’ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. 

ಬೆಂಗಳೂರು : ನಗರಗಳಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಒತ್ತು ನೀಡುವಂತೆಯೇ ಹಳ್ಳಿಗಳಲ್ಲೂ ಮನೆ-ಮನೆಯಿಂದ ಕಸ ಸಂಗ್ರಹಿಸಿ, ವೈಜ್ಞಾನಿಕ ವಿಲೇವಾರಿ ಮಾಡಲು ‘ಸುಸ್ಥಿರ ಘನ ತ್ಯಾಜ್ಯ ವಿಲೇವಾರಿಗೆ’ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಗಳ ಜತೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಗರಗಳ ಮಾದರಿಯಲ್ಲೇ ಹಳ್ಳಿಗಳಲ್ಲೂ ತ್ಯಾಜ್ಯ ಸಮಸ್ಯೆಯು ಮಾರಕವಾಗಿ ಬದಲಾಗಿದೆ. ಕಸದ ಬಗ್ಗೆ ಅರಿವಿನಿ ಕೊರತೆಯಿಂದಾಗಿ ರಸ್ತೆ ಬದಿಗಳಲ್ಲಿ ಪ್ಲಾಸ್ಟಿಕ್‌ ಹಾಗೂ ಘನತ್ಯಾಜ್ಯ ರಾಶಿ ಹಾಕಲಾಗುತ್ತಿದೆ. ಹಸಿ ತ್ಯಾಜ್ಯವನ್ನು ಬಹುತೇಕ ರೈತರು ಕಾಂಪೋಸ್ಟ್‌ ಮಾಡುತ್ತಾರಾದರೂ ಪ್ಲಾಸ್ಟಿಕ್‌ ಕಸ ವಿಲೇವಾರಿ ಬಗ್ಗೆ ಸೂಕ್ತ ಮಾಹಿತಿ ಇಲ್ಲ. ಹೀಗಾಗಿ ಅವೈಜ್ಞಾನಿಕ ವಿಲೇವಾರಿ ಹಾಗೂ ಪ್ಲಾಸ್ಟಿಕ್‌ ಕಸವನ್ನು ಸುಡುತ್ತಿರುವುದರಿಂದ ಅನಾರೋಗ್ಯ ಸಮಸ್ಯೆ ಉಂಟಾಗುತ್ತಿದೆ.

ಹೀಗಾಗಿ ಸ್ವಚ್ಛ ಭಾರತ ಯೋಜನೆಯಡಿ ಹಳ್ಳಿಗಳಲ್ಲೂ ಸುಸ್ಥಿರ ಘನ ತ್ಯಾಜ್ಯ ವಿಲೇವಾರಿ ಶುರು ಮಾಡಲಾಗುವುದು. ಮೊದಲ ಹಂತದಲ್ಲಿ ಪ್ರತಿ ತಾಲೂಕಿನಲ್ಲಿ ಎರಡು ಗ್ರಾಮದಲ್ಲಿ ಸುಸ್ಥಿರ ತ್ಯಾಜ್ಯ ವಿಲೇವಾರಿಯನ್ನು ಮಾದರಿಯಾಗಿ ಕೈಗೊಳ್ಳಲಾಗುವುದು. ಸುತ್ತಲಿನ ಹಳ್ಳಿಗಳನ್ನು ಕ್ಲಸ್ಟರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. 2-3 ಹಳ್ಳಿಗಳ ಕಸವನ್ನು ಒಂದೆಡೆ ಶೇಖರಿಸಿ ಹಸಿ ಹಾಗೂ ಒಣ ತ್ಯಾಜ್ಯವನ್ನಾಗಿ ಬೇರ್ಪಡಿಸಲಾಗುವುದು. ಹಸಿ ತ್ಯಾಜ್ಯವನ್ನು ಕಾಂಪೋಸ್ಟ್‌ ಆಗಿ ಪರಿವರ್ತಿಸಿ ರೈತರಿಗೆ ಗೊಬ್ಬರ ಬಳಕೆಗೆ ವಾಪಸು ನೀಡಲಾಗುವುದು. ಘನ ತ್ಯಾಜ್ಯವನ್ನು ಮಾರಾಟ ಮಾಡಿ ಬಂದ ಹಣವನ್ನು ಕಸ ವಿಲೇವಾರಿ ಖರ್ಚಿಗೆ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಮೊದಲಿಗೆ ಪ್ರಾಯೋಗಿಕವಾಗಿ ಉಡುಪಿ ಜಿಲ್ಲೆಯಲ್ಲಿ ಯೋಜನೆ ಜಾರಿ ಮಾಡುವ ಚಿಂತನೆ ಇದೆ. ಬಳಿಕ ಪ್ರತಿ ತಾಲೂಕಿನ ಎರಡು ಗ್ರಾಮಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆ ಮಾಡಲಾಗುವುದು. ಪ್ರತಿಕ್ರಿಯೆ ಗಮನಿಸಿಕೊಂಡು ಘನ ತ್ಯಾಜ್ಯ ಸಂಗ್ರಹಕ್ಕೆ ಅಗತ್ಯ ಸಿಬ್ಬಂದಿ ನೇಮಕ ಹಾಗೂ ಮನೆ-ಮನೆಯಿಂದ ಕಸ ಸಂಗ್ರಹಿಸಲು ಅಗತ್ಯ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಪ್ರಾಯೋಗಿಕವಾಗಿ ಉಡುಪಿ ಜಿಲ್ಲೆಯಲ್ಲಿ ಮಾಡುವ ಯೋಚನೆ ಇದೆ. ರೂಪುರೇಷೆಗಳು ಅಂತಿಮಗೊಂಡ ಬಳಿಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ನವೆಂಬರ್‌ ವೇಳೆಗೆ ಬಯಲು ಬಹಿರ್ದೆಸೆ ಮುಕ್ತ

ಸ್ವಚ್ಛ ಭಾರತ ಅಭಿಯಾನದ ಅಡಿ ಈಗಾಗಲೇ 20 ಜಿಲ್ಲೆಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. ಅ.2 ರೊಳಗಾಗಿ ಎಲ್ಲಾ ಜಿಲ್ಲೆಗಳನ್ನೂ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಬೇಕಾಗಿತ್ತು. ಆದರೆ, ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಉದ್ದೇಶಿತ ಸಮಯಕ್ಕೆ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಉಳಿದ ಹತ್ತು ಜಿಲ್ಲೆಗಳಲ್ಲಿ 7 ಜಿಲ್ಲೆಗಳಲ್ಲಿ ಅನುಷ್ಠಾನ ಪೂರ್ಣಗೊಂಡಿದ್ದು ಬಾಕಿ ಇರುವ 1.5 ಲಕ್ಷ ಶೌಚಾಲಯ ನಿರ್ಮಾಣ ಗುರಿಯನ್ನು ನವೆಂಬರ್‌ಗೆ ಪೂರ್ಣಗೊಳಿಸಲಾಗುವುದು. ಜತೆಗೆ ಶೌಚಾಲಯ ಬಳಕೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದರು.

ಈ ವೇಳೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌, ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತ ಡಾ. ಆರ್‌. ವಿಶಾಲ್‌ ಹಾಜರಿದ್ದರು.