ಬೆಂಗಳೂರು: ನಾಡಿನ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರು ಇನ್ನು ಮುಂದೆ ಜನರಿಗೆ ಮತ್ತಷ್ಟು ಹತ್ತಿರವಾಗುವ ಸಲುವಾಗಿ ‘ಈ ಹೆಜ್ಜೆ’ ಎಂಬ ಅಂತರ್ಜಾಲ ವೆಬ್ ಸೈಟ್ ಆರಂಭಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಬದುಕಿನ ಇನ್ನಷ್ಟು ಮಗ್ಗಲುಗಳನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಅಂತರ್ಜಾಲ ತಾಣ ಆರಂಭಿಸುತ್ತಿದ್ದೇನೆ.

ಕೇವಲ ಪುಸ್ತಕ ಓದುವ ಹವ್ಯಾಸದಲ್ಲಿಯೇ ತೊಡಗಿದ್ದ ನಾನು ಅಂತರ್ಜಾಲ ಬಳಕೆಯಲ್ಲಿ ಒಂದಿಷ್ಟು ಹಿಂದುಳಿದಿದ್ದೆ. ಆದರೆ, ಜನರಿಗೆ ಹತ್ತಿರವಾಗಲು ಈ ವೆಬ್‌ಸೈಟ್ ಪ್ರಾರಂಭಿಸಿದ್ದೇನೆ ಎಂದರು. ಈ ವೈಬ್‌ಸೈಟ್‌ನಲ್ಲಿ ನನ್ನ ಬದುಕಿನ ಸಿಹಿ ಕಹಿ ಅನುಭವಗಳು, ನಾನು ಪ್ರಸಿದ್ಧಿಯಾಗುವುದಕ್ಕೂ ಮುಂಚಿನ ಹಾಸ್ಯ ಕಾರ್ಯಕ್ರಮಗಳು ಲಭ್ಯವಿರಲಿವೆ. ಈವರೆಗೂ ನಾನು ನಡೆಸಿಕೊಟ್ಟು ಬಹುತೇಕ ರ್ಯಕ್ರಮಗಳನ್ನು ಪೋಸ್ಟ್ ಮಾಡಲಾಗುವುದು. ಜತೆಗೆ ಒಂದು ತಿಂಗಳ ಮುಂಚಿತವಾಗಿಯೇ ತಾವು ಭಾಗವಹಿಸುವ ಕಾರ್ಯಕ್ರಮಗಳ ಸ್ಥಳ ಹಾಗೂ ದಿನಾಂಕಗಳ ಪಟ್ಟಿ, ಲಭ್ಯತೆ ಕುರಿತ ಮಾಹಿತಿ ಸಿಗಲಿದೆ ಎಂದರು. 

ಈಗಾಗಲೇ ತಮ್ಮ ಕಾರ್ಯಕ್ರಮಗಳ ವಿಡಿಯೋಗಳನ್ನು ಅನೇಕರು ಯುಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ವೈಯಕ್ತಿಕವಾಗಿ ಹಣ ಮಾಡಿ ಕೊಳ್ಳುತ್ತಿದ್ದಾರೆ. ಅದನ್ನು ತಪ್ಪಿಸುವ ಉದ್ದೇಶದಿಂದ ಈ ನಡೆಗೆ ಮುಂದಾಗಿದ್ದೇನೆ ಎಂದರು. ಹೆಚ್ಚಿನ ಮಾಹಿತಿಗೆ ಅಂತರ್ಜಾಲ ವಿಳಾಸ . www.gangavatipranesh.com  ಸಂಪರ್ಕಿಸಲು ಕೋರಿದರು.