ಬೆಂಗಳೂರಿನ ಶಿವಾಜಿನಗರದಲ್ಲಿ ಕಳೆದ ರಾತ್ರಿ ಮಿನಿ ಮುಂಬೈ ಸೃಷ್ಟಿಯಾಗಿತ್ತು.  ಕಳೆದ ರಾತ್ರಿ ಅದ್ದೂರಿ ಗಣೇಶ ಉತ್ಸವ ನಡೀತು. ಪೊಲೀಸ್ ಸರ್ಪಗಾವಲಿನಲ್ಲಿ ನಡೆದ ಗಣೇಶ ಮೂರ್ತಿ ಮೆರವಣಿಗೆ ಹೇಗಿತ್ತು..?

ಬೆಂಗಳೂರು(ಆ. 30): ಗಣಪತಿ ಬಪ್ಪಾ ಮೋರಿಯಾ ಜಯಘೋಷ... 500 ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಮೆರವಣಿಗೆ.. ಡೊಳ್ಳು ತಮಟೆ ಸದ್ದಿಗೆ ಹೆಜ್ಜೆ ಹಾಕುತ್ತಿರುವ ಯುವಸಮುದಾಯ. ಎತ್ತ ನೋಡಿದರೂ ಖಾಕಿ ಸರ್ಪಗಾವಲು.. ಇದೆಲ್ಲಾ ನೋಡಿ ಮುಂಬೈ ನಗರಿಯಲ್ಲಿನ ಗಣೇಶ ಉತ್ಸವದ ಸಂಭ್ರಮ ಎಂದು ಯಾರಿಗಾದರೂ ಅನಿಸದೇ ಇರದು. ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದ ಗಣೇಶ ಉತ್ಸವದ ಮೆರಗು ಇದು.

ಆರ್.ಎಸ್.ಎಸ್ ಕಾರ್ಯಕರ್ತ ರುದ್ರೇಶ್​​ ಹತ್ಯೆ ಪ್ರಕರಣ ನಂತರ ಶಿವಾಜಿನಗರದ ಸುತ್ತಾಮುತ್ತಲಿನ ಪ್ರದೇಶಗಳಾದ ಟ್ಯಾನರಿ ರಸ್ತೆ, ಕೆಜಿ ಹಳ್ಳಿ ಏರಿಯಾಗಳು ಅತ್ಯಂತ ಸೂಕ್ಷ ಪ್ರದೇಶಗಳೆಂದು ಗುರುತಿಸ್ಪಟ್ಟಿವೆ. ಮೊದಲ ಬಾರಿಗೆ ಶಿವಾಜಿನಗರದಲ್ಲಿ ಗಣೇಶನ ಉತ್ಸವ ನಡೆದಿದ್ದಾಗ ರುದ್ರೇಶ್'​​ನನ್ನ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಹೀಗಾಗಿ ಈ ಬಾರಿ ಗಣೇಶನ ಉತ್ಸವಕ್ಕೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಹೆಚ್ಚುವರಿ ಪೊಲೀಸ್ ಆಯುಕ್ತ, ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಸುಮಾರು 2500 ಕ್ಕೂ ಹೆಚ್ಚು ಮಂದಿ ಪೊಲೀಸರು ಗಣೇಶನ ಮೆರವಣಿಗೆಗೆ ಬಂದೋಬಸ್ತ್​​ ಕಲ್ಪಿಸಿದರು.

ಬಿಗಿ ಭದ್ರತೆ ನಡುವೆಯೇ 500 ಕ್ಕೂ ಹೆಚ್ಚು ಗಣೇಶನ ಮೂರ್ತಿಗಳ ಮೆರವಣಿಗೆ ನಡೆಯಿತು. ಈ ವೇಳೆ ಆರೆಸ್ಸೆಸ್​​ ಕಾರ್ಯಕರ್ತ ರುದ್ರೇಶ್​​ ಬೆಂಬಲಿಗರು ರುದ್ರೆಶ್​​ ಭಾವಚಿತ್ರಕ್ಕೆ ಹಾಲಿನ ಅಭಿಷೇಕವನ್ನೂ ಮಾಡಿದ್ರು.

ಒಟ್ನಲ್ಲಿ, ಪೊಲೀಸರ ಮುನ್ನಚ್ಚರಿಕೆ ಕ್ರಮ ಹಾಗೂ ಬಿಗಿ ಭದ್ರತೆ ಕೈಗೊಂಡಿದ್ದರಿಂದ ಶಾಂತಿಯುತವಾಗಿ ಗಣೇಶನ ಉತ್ಸವ ಜರುಗಿತ್ತು.

- ರವಿಕುಮಾರ್​​ / ಅಭಿಷೇಕ್​​ ಜೈಶಂಕರ್,​​ ಕ್ರೈಂ ಬ್ಯೂರೋ ಸುವರ್ಣ ನ್ಯೂಸ್​​