ಉಡುಪಿಯ ಅತ್ಯಂತ ಹಳೆಯ ಸಾರ್ವಜನಿಕ ಗಣೇಶೋತ್ಸವ ಈ ಬಾರಿ ವಿವಾದಕ್ಕೆ ಗುರಿಯಾಗಿದೆ. ಕಡಿಯಾಳಿ ದೇವಸ್ಥಾನದ ಆವರಣದಲ್ಲಿ ವಿಶ್ವಹಿಂದೂ ಪರಿಷತ್ ಅರ್ಧ ಶತಮಾನದಿಂದ ನಡೆಸಿಕೊಂಡು ಬರುತ್ತಿರುವ ಹಬ್ಬಕ್ಕೆ ರಾಜಕೀಯದ ಕರಿನೆರಳು ಬಿದ್ದಿದೆ.
ಉಡುಪಿ(ಆ.23): ಕಡಿಯಾಳಿ ಗಣೇಶೋತ್ಸವ. ಉಡುಪಿ ಜಿಲ್ಲೆಯ ಅತಿದೊಡ್ಡ ಗಣೇಶ ಸಂಭ್ರಮ. ಬಹಳ ವಿಜ್ರಂಬಣೆಯಿಂದ ಗಣೇಶನ ಆಚರಣೆ ನಡೆಯುತ್ತೆ. ರಾಜ್ಯಪಾಲ ವಜೂಬಾಯಿ ವಾಲಾ ಸೇರಿ ಸಾಕಷ್ಟು ಗಣ್ಯರು ಇಲ್ಲಿನ ಗಣೇಶ ವೈಭವಕ್ಕೆ ಸಾಕ್ಷಿಯಾಗಿದ್ದಾರೆ. ಆದರೆ ಈ ಬಾರಿ ವಿಶ್ವ ಹಿಂದೂ ಪರಿಷತ್ ಆಯೋಜನೆಯ ಕಡಿಯಾಳಿ ಗಣೇಶೋತ್ಸವಕ್ಕೆ ಅಡ್ಡಿಯಾಗಿದೆ. ಕಡಿಯಾಳಿ ದೇವಸ್ಥಾನಕ್ಕೆ ನೇಮಕ ಆಗಿರೋ ಹೊಸ ಆಡಳಿತ ಮಂಡಳಿಗೆ ಕಾಂಗ್ರೆಸ್ ಪಕ್ಷದ ಕೃಪಾಶ್ರಯ ಇದೆ ಅನ್ನೋ ಕಾರಣಕ್ಕೆ ವಿವಾದ ತಲೆದೋರಿದೆ. ಮಂಟಪಕ್ಕೆ ಬರುವ ರಸ್ತೆಗೆ ಗೇಟ್ ಅಳವಡಿಸಿದ್ದು, ದೇವಸ್ಥಾನದ ಯಾವುದೇ ಸವಲತ್ತು ನೀಡಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದೆ.. ಇದು ರಾಜಕೀಯ ಪ್ರೇರಿತ ನಿರ್ಧಾರ ಅನ್ನೋದು ಬಿಜೆಪಿ ಆರೋಪ
ಕಡಿಯಾಳಿ ದೇವಸ್ಥಾನಕ್ಕೂ ಅಲ್ಲೇ ಪಕ್ಕದಲ್ಲಿರುವ ಕಾತ್ಯಾಯಿನಿ ಮಂಟಪಕ್ಕೂ ಹಲವು ವರ್ಷಗಳಿಂದ ವಿವಾದ ಇದೆ. ಪ್ರಕರಣ ಕೋರ್ಟ್ ನಲ್ಲಿದ್ದು, ಅದೊಂದು ಅಕ್ರಮ ಕಟ್ಟಡ, ಅಲ್ಲಿ ಯಾವುದೇ ಕಾರಣಕ್ಕೂ ಗಣೇಶೋತ್ಸವ ನಡೆಯಬಾರ್ದು ಅನ್ನೋದು ಇನ್ನೊಂದು ಗುಂಪಿನ ವಾದ.
ಇತ್ತ ದೇವಸ್ಥಾನದ ಆಡಳಿತ ಮಂಡಳಿ ಪ್ರತ್ಯೇಕ ಗಣೇಶ ಸಂಭ್ರಮ ಆಚರಣೆಗೂ ಸಿದ್ಧತೆ ಮಾಡಿಕೊಂಡಿದೆ. ಒಟ್ಟಿನಲ್ಲಿ ಗಣೇಶನ ವಿಚಾರದಲ್ಲೂ ರಾಜಕೀಯ ತಳುಕುಹಾಕಿಕೊಂಡಿದ್ದು, ಜಿಲ್ಲೆಯ ಅತೀ ದೊಡ್ಡ ಗಣಪನ ಪೂಜೆ ಏನಾಗುತ್ತೇ ಅನ್ನೋದು ಸದ್ಯಕ್ಕೆ ಎದುರಾಗಿರೋ ಪ್ರಶ್ನೆ
