ಗದಗ (ಅ.02):ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತನಿಗೆ ಇನ್ನೂ ಸರಿಯಾದ ಗೌರವ ಸಿಕ್ಕಿಲ್ಲ ಎಂದರೆ ತಪ್ಪಾಗಲಾರದು. ಗದಗದ ಬೆಟಗೇರಿಯ ನೇಕಾರರ ಓಣಿಯ ಗಾಂಧಿ ಕಟ್ಟಡವನ್ನು ನೋಡಿದಾಗ ನಿಜಕ್ಕೂ ಮನಸಿಗೆ ಖೇದವುಂಟಾಗುವುದರಲ್ಲಿ ಸಂಶಯವಿಲ್ಲ. ಕಟ್ಟಡದ ಕಾಮಗಾರಿ ಶುರುವಾಗಿ ವರ್ಷಗಳೇ ಉರುಳಿದರೂ ಪೂರ್ಣಗೊಳ್ಳದೇ ನೆನಗುದಿಗೆ ಬಿದ್ದಿದೆ. ಆದರೆ ಜನ ಮಾತ್ರ ಮಹಾತ್ಮರಿಗೆ ನಿತ್ಯ ಪೂಜೆ ಸಲ್ಲಿಸುವುದನ್ನು ಮರೆತಿಲ್ಲ.

ಸ್ವಂತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧಿ ಬಂದು ಜನಾಂದೋಲನ ಮಾಡಿದ ಸ್ಥಳವಿದು. 1944ರಲ್ಲಿ ಗಾಂಧಿಜೀಯವರು ಗದಗಿಗೆ ಭೇಟಿ ಕೊಟ್ಟಿದ್ದ ವೇಳೆ ಬೆಟಗೇರಿಯ ನೇಕಾರರ ಓಣಿಗೂ ಬಂದಿದ್ದರು. ಇದೇ ನೆನಪಿನಲ್ಲಿ ರಾಷ್ಟ್ರಪಿತನ ಮರಣದ ನಂತರ ಅವರ ಚಿತಾಭಸ್ಮ ತಂದಿಟ್ಟು ಒಂದು ಸ್ಮಾರಕವನ್ನು ನಿರ್ಮಿಸಿ ನಿತ್ಯ ಪೂಜೆ ಸಲ್ಲಿಸುತ್ತಾರೆ.

ಹಲವು ಕಾರಣಗಳಿಂದ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತು ಹೋಯಿತು. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಸುಳಿದಿಲ್ಲ ಅಂತ ಸ್ಥಳೀಯರು ಆರೋಪಿಸಿದ್ದಾರೆ. ಗಾಂಧಿ ಪ್ರತಿಮೆಯನ್ನು ನಗರಸಭೆಯಲ್ಲಿ ತಂದಿಟ್ಟು ಮೂರು ವರ್ಷ ಕಳೆದಿವೆ. ಗಾಂಧಿಗುಡಿ ಜೀರ್ಣೋದ್ಧಾರ ಮಾಡಿ ಪ್ರತಿಷ್ಠಾಪಿಸಲು ಯಾರೂ ಕೂಡ ಮುಂದಾಗುತ್ತಿಲ್ಲ.

ಹಲವು ಯೋಜನೆಗಳಿಗೆ ಸಾಕಷ್ಟು ಹಣ ಹಲವು ರೀತಿ ಪೋಲು ಆಗುತ್ತದೆ. ಆದರೆ ಜನಪ್ರತಿನಿಧಿಗಳು ಸಾರ್ಥಕ ವ್ಯಕ್ತಿಗಳ ಸ್ಮಾರಕ ಪೂರ್ಣಗೊಳಿಸಿದರೆ ಮಹಾತ್ಮನಿಗೆ ಗೌರವ ನೀಡಿದಂತಾಗುತ್ತದೆ.