Asianet Suvarna News Asianet Suvarna News

ಕಳಸಾ ಕಿಚ್ಚು; ಇಂದು ಗದಗ, ನರಗುಂದ ಬಂದ್

ನರಗುಂದ ಬಂಡಾಯಕ್ಕೆ ಇವತ್ತಿಗೆ 37ವರ್ಷ. ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದ ದಿನ. ಅಲ್ಲದೇ ಇದೇ ನೆಲದಲ್ಲಿ ಮಹದಾಯಿ ಕಳಸಾ ಕಿಚ್ಚು ಆರಂಭವಾಗಿ ಇಂದಿಗೆ 2 ವರ್ಷ. ಈ ಹಿನ್ನೆಲೆಯಲ್ಲಿ ಇಂದು ಹುತಾತ್ಮ ರೈತರ ದಿನದ ಅಂಗವಾಗಿ ಇಂದು ರೈತರು ಸರ್ಕಾರದ ವಿರುದ್ಧ ಸಮರ ಸಾರಲು ಸಜ್ಜಾಗಿದ್ದಾರೆ.​

gadag bandh kalasa banduri farmers martyrs day

ಗದಗ(ಜುಲೈ 21): ನರಗುಂದದಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದ ರೈತರ ಹೋರಾಟಕ್ಕೀಗ ಬರೋಬ್ಬರಿ 37 ವರ್ಷ. 1980, ಜುಲೈ21 ರಂದು  ಹೋರಾಟವನ್ನು ರೈತರು ತೀವ್ರಗೊಳಿಸಿದ್ದರು. ಈ ವೇಳೆ ಪೊಲೀಸರು ಗುಂಡು ಹಾರಿಸಿದ್ದರು. ಒಂದೆಡೆ ಪೊಲೀಸರ ಗುಂಡಿಗೆ ರೈತರು ಬಲಿಯಾದ್ರೆ, ರೈತರ ಕಿಚ್ಚಿಗೆ ಹಲವು ಪೊಲೀಸರೂ ಹತರಾಗಿದ್ದರು. ಹೀಗಾಗಿ ಪ್ರತಿ ವರ್ಷದಂತೆ ಇಂದು ಸಹ ನರಗುಂದದಲ್ಲಿ ರೈತ ಹುತಾತ್ಮ ದಿನ ಆಚರಿಸಲಾಗುತ್ತಿದೆ. ಆದ್ರೆ ರೈತರು ಈ ಬಾರಿ ಹುತಾತ್ಮ ದಿನವನ್ನ ಬೇರೆಯದೇ ರೀತಿಯಲ್ಲಿ ಆಚರಿಸಲು ರೆಡಿಯಾಗಿದ್ದಾರೆ.

ಇದೇ ಬಂಡಾಯದ ನೆಲದಲ್ಲೀಗ ಮಹದಾಯಿ-ಕಳಸಾ ಕಿಚ್ಚು ಹತ್ತಿದೆ. ರೈತರು ಮಹದಾಯಿ ಹೋರಾಟ ಪ್ರಾರಂಭಿಸಿ 2 ವರ್ಷ ಕಳೆದರೂ ರಾಜ್ಯ ಸರ್ಕಾರದಿಂದಾಗಲೀ ಅಥವಾ ಕೇಂದ್ರ ಸರ್ಕಾರದಿಂದಾಗಲೀ ಸಮಸ್ಯೆ ಬಗೆಹರಿಸಲು ಇನ್ನೂ ಸಾಧ್ಯವಾಗಿಲ್ಲ. ಕಳಸಾ ಹೋರಾಟ ವೇದಿಕೆ ಅಧ್ಯಕ್ಷ ವಿರೇಶ್ ಸೊಬರದಮಠ ಉಪವಾಸ ಸತ್ಯಾಗ್ರಹ ಆರಂಭಿಸಿ 5 ದಿನಗಳಾಯಿತು. ಹೀಗಾಗಿ ರೈತರು ರೈತ ಹುತಾತ್ಮ ದಿನದಂದೇ ಸರ್ಕಾರಗಳ ವಿರುದ್ಧ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ.

ಇಂದು ಗದಗ ಜಿಲ್ಲೆ ನರಗುಂದದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುವ ಸಂಭವವಿದೆ. ರೈತ ಹುತ್ಮಾತ್ಮ ದಿನಾಚರಣೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತ ಮುಖಂಡರು, ರೈತರು, ಜನಪ್ರತಿನಿಧಿಗಳು, ವಿವಿಧ ಕನ್ನಡ - ದಲಿತ ಪರ ಸಂಘಟನೆಗಳ ಮುಖಂಡರು ಅಪಾರ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಹೀಗಾಗಿ ನರಗುಂದ ಪಟ್ಟಣದಲ್ಲಿ ಮುಂಜಾಗೃತೆ ಕ್ರಮವಾಗಿ ಇಂದು ಬೆಳಗ್ಗೆಯಿಂದಲೇ ಪೂರ್ಣ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೇ, ಗದಗ ನಗರ ಹಾಗೂ ನರಗುಂದ ತಾಲೂಕನಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

- ಅಮೃತ ಅಜ್ಜಿ, ಗದಗ, ಸುವರ್ಣ ನ್ಯೂಸ್

Follow Us:
Download App:
  • android
  • ios