ಬೆಂಗಳೂರು[ಮಾ.19]: ಇಂದಿರಾ ಕ್ಯಾಂಟೀನ್ ಆಹಾರ ಸೇವನೆ ಮಾಡಿದರೆ ವಾಂತಿ, ಭೇದಿ, ಮಿದುಳು ಸಂಬಂಧಿಸಿದ ಕಾಯಿಲೆ, ಕಡಿಮೆ ರಕ್ತದೊತ್ತಡದಂತಹ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂಬ ಆಘಾತಕಾರಿ ಅಂಶ ಸಾರ್ವಜನಿಕ ಆರೋಗ್ಯ ಸಂಸ್ಥೆ ಮತ್ತು ಎಂ.ಎಸ್. ರಾಮಯ್ಯ ಆಸ್ಪತ್ರೆ ಪ್ರಯೋಗಾಲಯದ ವರದಿಯಿಂದ ಬಹಿರಂಗಗೊಂಡಿದೆ.

ಮೇಯರ್ ಗಂಗಾಂಬಿಕೆ ನಿವಾಸವಿರುವ ಜಯನಗರ ವಾರ್ಡ್‌ನ ಇಂದಿರಾ ಕ್ಯಾಂಟೀನ್‌ನಲ್ಲಿ ೧೫೦ ಎಂಎಲ್ ಸಾಂಬಾರು, ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ನಿವಾಸವಿರುವ ಜೆ.ಪಿ.ನಗರ ವಾರ್ಡ್‌ನ ಕ್ಯಾಂಟೀನ್‌ನಲ್ಲಿ 100 ಎಂಎಲ್ ಸಾಂಬಾರು, ಉಪಮೇಯರ್ ಭದ್ರೇಗೌಡ ವಾಸವಿರುವ ನಾಗಪುರ ವಾರ್ಡ್‌ನ ಕ್ಯಾಂಟೀನ್‌ನಿಂದ 460 ಗ್ರಾಂ ಅನ್ನ ಹಾಗೂ 240 ಎಂಎಲ್ ಸಾಂಬಾರು ಮಾದರಿಯನ್ನು ಸಾರ್ವಜನಿಕ ಆರೋಗ್ಯಸಂಸ್ಥೆಯ ಪ್ರಯೋಗಾಲಯದ ಪರೀಕ್ಷೆ ನೀಡಲಾಗಿತ್ತು.

ಆಹಾರದಲ್ಲಿ ಫಂಗಸ್, ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಮನುಷ್ಯರು ಸೇವನೆಗೆ ಯೋಗ್ಯವಿಲ್ಲ ಎಂದು ಸಾರ್ವಜನಿಕ ಆರೋಗ್ಯ ಸಂಸ್ಥೆ ಮತ್ತು ಎಂ. ಎಸ್.ರಾಮಯ್ಯ ಆಸ್ಪತ್ರೆ ವರದಿ ನೀಡಿದೆ. ಇಂತಹ ಆಹಾರ ಸೇವನೆ ಮಾಡುವವರಿಗೆ ವಾಂತಿ, ಭೇದಿ ಮತ್ತು ಮಿದುಳು ಸಂಬಂಧಿಸಿದ ಕಾಯಿಲೆ ಮತ್ತು ಕಡಿಮೆ ರಕ್ತದೊತ್ತಡದಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ

ಊಟ ಸೇವನೆ ನಿಲ್ಲಿಸಿದ ಪೌರ ಕಾರ್ಮಿಕರು: ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಯೋಗಾಲ ಯದ ವರದಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಪಾಲಿಕೆಯ ಗೋವಿಂದರಾಜನಗರ ವಾರ್ಡ್ ಬಿಜೆಪಿ ಸದಸ್ಯ ಉಮೇಶ್ ಶೆಟ್ಟಿ, ಪ್ರತಿನಿತ್ಯ ನಗರದ 198 ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಾವಿರಾರು ಮಂದಿ ಬಡವರು ಊಟ ಸೇವನೆ ಮಾಡುತ್ತಿದ್ದಾರೆ. ಅವರ ಆರೋಗ್ಯದ ಗತಿ ಏನು ಎಂಬ ಆಂತಕ ಮೂಡಿದೆ. ಇನ್ನು ಇಂದಿರಾ ಕ್ಯಾಂಟೀನ್ ಗಳಲ್ಲೇ ಪಾಲಿಕೆಯ 16 ಸಾವಿರ ಗುತ್ತಿಗೆ ಪೌರಕಾರ್ಮಿಕರಿಗೆ ಊಟ ನೀಡಲಾಗುತ್ತಿದೆ. ಕೆಲ ಪೌರಕಾರ್ಮಿಕರು ಊಟ ಸೇವನೆಯಿಂದ ವಾಂತಿ, ಭೇದಿ ಶುರುವಾದ ಹಿನ್ನೆಲೆಯಲ್ಲಿ ಕ್ಯಾಂಟೀನ್‌ನಲ್ಲಿ ಊಟ ಸೇವನೆ ನಿಲ್ಲಿಸಿದ್ದಾರೆ ಎಂದು ಆರೋಪಿಸಿದರು.

ಪ್ರತಿ ವಾರ್ಡ್‌ನ ಇಂದಿರಾ ಕ್ಯಾಂಟೀನ್‌ನಲ್ಲಿ ಸಾವಿರಕ್ಕೂ ಹೆಚ್ಚು ಜನರು ಊಟ, ತಿಂಡಿ ಸೇವನೆ ಮಾಡುತ್ತಾರೆ ಎಂದು ಸುಳ್ಳು ಲೆಕ್ಕ ನೀಡಲಾಗುತ್ತಿದೆ. ಆದರೆ, ವಾಸ್ತವವಾಗಿ ಕ್ಯಾಂಟೀನ್‌ನಲ್ಲಿ 200 ಜನ ಸಹ ಸರಿಯಾಗಿ ಆಹಾರ ಸೇವಿಸುತ್ತಿಲ್ಲ. ಕ್ಯಾಂಟೀನ್ ಗಳಲ್ಲಿ ಆಳವಡಿಸಿರುವ ಸಿ.ಸಿ.ಕ್ಯಾಮರಾ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಎಷ್ಟು ಜನರು ಬಂದಿದ್ದಾರೆ ಎನ್ನುವುದನ್ನು ತಿಳಿಸುವ ಫಲಕವನ್ನು ಉದ್ದೇಶ ಪೂರ್ವಕವಾಗಿ ಬಂದ್ ಮಾಡಲಾಗಿದೆ ಎಂದು ಆರೋಪಿಸಿದರು.

ಇಂದಿರಾ ಕ್ಯಾಂಟೀನ್ ಮೂಲಕ ಸಾವಿರಾರು ಜನರಿಗೆ ವಿಷಪೂರಿತ ಆಹಾರ ಪೂರೈಕೆ ಮಾಡುತ್ತಿರುವ ಚೇಫ್ ಟಾಕ್ ಮತ್ತು ರಿವಾರ್ಡ್ಸ್ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ, ಲೋಕಾಯುಕ್ತ ಸಂಸ್ಥೆ ಮತ್ತು ಎಸಿಬಿಗೆ ದೂರು ನೀಡಲಾಗುವುದು ಎಂದು ಕೆ. ಉಮೇಶ್ ಶೆಟ್ಟಿ ತಿಳಿಸಿದರು.