ಕೊಲ್ಲಮ್ [ಜು.3]: ಇದು ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಬಡತನದಲ್ಲೇ ಅನಾಥ ಮಕ್ಕಳ ಶಾಲೆಯಲ್ಲಿ ಬೆಳೆದ ಐಎಎಸ್ ಅಧಿಕಾರಿಯ ಕಥೆ. 

ಸದ್ಯ ಕೇರಳದ ಕೊಲ್ಲಂ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಬಿ.ಅಬ್ದುಲ್ ನಸರ್ ಅವರ ಜೀವನಗಾಥೆ.

ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಐದನೇ ವಯಸ್ಸಿನಲ್ಲೇ  ತಂದೆಯನ್ನು,  6 ಮಕ್ಕಳ ಕುಟುಂಬವನ್ನು ತಾಯಿ ಕಷ್ಟದಿಂದ ಸಲುಹುತ್ತಿದ್ದ ವೇಳೆ 5ನೇ ವಯಸ್ಸಿಗೆ ಅನಾಥಾಶ್ರಮ ಸೇರಿದ್ದು, ಅಲ್ಲಿಂದಲೇ ಚಿಗುರಿತ್ತು ಐಎಎಸ್ ಆಗುವ ಕನಸು.

ತಲಸ್ಸೇರಿಯ ಅನಾಥ ಮಕ್ಕಳ ಶಾಲೆಯಲ್ಲಿ ಪ್ರಾಥಮಿಕ  ಶಿಕ್ಷಣ ಪಡೆಯುತ್ತಿದ್ದಾಗ ಇಲ್ಲಿಗೆ ಐಎಎಸ್ ಅಧಿಕಾರಿ ಅಮಿತಾಬ್ ಕಾಂತ್ ಭೇಟಿ ನೀಡಿದ್ದರು. ಅವರನ್ನು ನೋಡಿ ನಸರ್ ಅವರಿಗೆ ಐಎಎಸ್ ಆಗಬೇಕೆನ್ನುವ ಕನಸು ಆರಂಭವಾಗಿತ್ತು.

ಆರೋಗ್ಯಾಧಿಕಾರಿಯಾಗಿ ಸೇವೆ

ಪದವಿ ಹಾಗೂ ಸ್ನಾಕೋತ್ತರ ಪದವಿಯನ್ನು ಇಂಗ್ಲೀಷ್ ಸಾಹಿತ್ಯದಲ್ಲಿ ಪಡೆದರು. ಆದರೆ ಅವರ ಐಎಎಸ್ ಕನಸು ಮಾತ್ರ ನಿಲ್ಲುವುದಿಲ್ಲ.ಮನೆಯ ಸ್ಥಿತಿ ಮುಂದಿನ ಓದಿಗೆ ಅಡ್ಡಿಯಾಗಿತ್ತು. ಮನೆಯ ಆರ್ಥಿಕ ಸ್ಥಿತಿ ಸುಧಾರಣೆಗೆ ಕೆಲಸಕ್ಕೆ ಸೇರುವುದು ಅನಿವಾರ್ಯವಾದಾಗ ಆರೋಗ್ಯಾಧಿಕಾರಿಯಾಗಿ ಸೇರಿದರು. ಕೆಲಸದಲ್ಲಿದ್ದಾಗ ಮತ್ತೆ ಕನಸಿಗೆ ರೆಕ್ಕೆ ಪುಕ್ಕ ಬಂದು ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದರು.

2017ರಲ್ಲಿ ಕನಸು ನನಸು

1994ರಲ್ಲಿ ಕೇರಳ ಲೋಕ ಸೇವಾ ಆಯೋಗ ಅರ್ಜಿ ಆಹ್ವಾನಿಸುತ್ತದೆ. ಆಗ ನಸರ್ ಅವರ ಸಿದ್ಧತೆ ಆರಂಭವಾಗಿ 2006ರಲ್ಲಿ ಕನಸು ನನಸಾಗಿ ಡೆಪ್ಯೂಟಿ ಕಲೆಕ್ಟರ್ ಆಗಿ ಆಯ್ಕೆಯಾದರು. 2017ರಲ್ಲಿ ಐಎಎಸ್ ಅಧಿಕಾರಿಯಾಗಿ ಬಡ್ತಿ ಸಿಕ್ಕಿತು. ಇದೀಗ ಕೊಲ್ಲಮ್ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದು, ಕನಸು ನನಸಾದ ಖುಷಿಯಲ್ಲಿದ್ದಾರೆ. ತಮ್ಮ ಮನಸ್ಸಿನಲ್ಲಿದ್ದ ಸಮಾಜದ ಬಗೆಗಿನ ಕಾಳಜಿಯೇ ಈ ಮಟ್ಟಕ್ಕೆ ಬೆಳೆಯಲು ಸ್ಫೂರ್ತಿ ಎನ್ನುತ್ತಾರೆ ಅಧಿಕಾರಿ ನಸರ್.