ನವದೆಹಲಿ[ಜೂ.19]: ಲೋಕಸಭೆಯಲ್ಲಿ ಸದಸ್ಯರ ಪ್ರಮಾಣವಚನ ಸ್ವೀಕಾರ ಸಂದರ್ಭ ಮಂಗಳವಾರ ಜೈ ಶ್ರೀರಾಮ್, ಜೈ ಮಾ ದುರ್ಗಾ, ಅಲ್ಲಾಹು ಅಕ್ಬರ್ ಘೋಷಣೆಗಳು ಮೊಳಗಿದವು. ಬಿಜೆಪಿಯ ಅನೇಕ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಕೊನೆಯಲ್ಲಿ ‘ಭಾರತ್ ಮಾತಾ ಕೀ ಜೈ’ ಹಾಗೂ ‘ಜೈ ಶ್ರೀರಾಮ್’ ಎಂದು ಘೋಷಣೆಗಳನ್ನು ಕೂಗಿದರು.

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸಂಸದರು ಜೈ ಹಿಂದ್, ಜೈ ಬೆಂಗಾಲ್, ಜೈ ಮಾ ದುರ್ಗಾ ಹಾಗೂ ಜೈ ಮಮತಾ ಎಂದು ಅಬ್ಬರಿಸಿದರು. ತೃಣಮೂಲ ಕಾಂಗ್ರೆಸ್ಸಿನ ಅಬು ತಹೇರ್ ಬೆಹನ್ ಅವರು ಅಲ್ಲಾಹು ಅಕ್ಬರ್ ಎಂದು ಕೂಗಿದರು. ಶಪಥಗ್ರಹಣ ಮಾಡಿದ ಸಂಸದರೊಬ್ಬರು ‘ವಂದೇ ಮಾತರಂ’ ಘೋಷಣೆ ಕೂಗಿದ್ದಕ್ಕೆ ಸಮಾಜವಾದಿ ಪಕ್ಷದ ಸಂಭಾಲ್ ಸಂಸದ ಶಫೀಕುರ್ ರೆಹಮಾನ್ ಬಾರ್ಕ್ ಅವರು ಆಕ್ಷೇಪ ಎತ್ತಿದರು. ಶಫೀಕುರ್ ಕ್ಷಮೆ ಕೇಳಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹ ಮಾಡಿದರು. ಪದೇ ಪದೇ ಹಂಗಾಮಿ ಸ್ಪೀಕರ್ ಸೂಚಿಸಿದರೂ ಘೋಷಣೆಗಳು ನಿಲ್ಲಲಿಲ್ಲ.

ಭಾರತ್ ಮಾ ತಾ ಕೀ ಜೈ ಎಂದು ಬಿಜೆಪಿ ಸಂಸದರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ‘ಮತ್ತೊಮ್ಮೆ ಹೇಳಿ’ ಎಂದು ಕಿಚಾಯಿಸಿದ ಪ್ರಸಂಗವೂ ನಡೆಯಿತು. ಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಅವರು ‘ಜೈ ಭೀಮ್, ಜೈ ಮೀಮ್, ತಕಬೀರ್ ಅಲ್ಲಾಹು ಅಕ್ಬರ್, ಜೈಹಿಂದ್’ ಎಂದು ಘೋಷಣೆ ಕೂಗಿದರು. ಮಥುರಾದ ಸಂಸದೆ, ಚಿತ್ರನಟಿ ಹೇಮಾ ಮಾಲಿನಿ ಅವರು ಪ್ರಮಾಣವಚನ ತೆಗೆದುಕೊಂಡ ನಂತರ ರಾಧೇ, ರಾಧೇ ಎಂದು ಹೇಳಿದರು.