Asianet Suvarna News Asianet Suvarna News

ಅಭಿಪ್ರಾಯ ಹೇಳಲು ಭಯ: ಹಿರಿಯ ಸಾಹಿತಿ ಡಾ. ಕಮಲಾ ಹಂಪನಾ

ಕಳೆದ ಮೂರು ವರ್ಷದಿಂದ ದೇಶ ಎತ್ತ ಸಾಗುತ್ತಿದೆ ಎಂದೇ ತಿಳಿಯುತ್ತಿಲ್ಲ: ಕಮಲಾ ಹಂಪನಾ

ಹಿಟ್ಲರ್ ಸಂಸ್ಕೃತಿ ಸೃಷ್ಟಿಯಾಗಿದೆಯೇ? | ಮನೆಗೆ ಹೋಗುತ್ತೇನೋ ಇಲ್ಲವೋ ಎಂಬ ಭೀತಿ

Frightened to Express the Views Says Kamala Hampana

ಬೆಂಗಳೂರು: ಕಳೆದ ಮೂರು ವರ್ಷಗಳಿಂದ ದೇಶ ಎತ್ತ ಸಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ವೇದಿಕೆಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಭಯವಾಗುತ್ತಿದೆ. ದೇಶದಲ್ಲಿ ಹಿಟ್ಲರ್ ಸಂಸ್ಕೃತಿಯ ವಾತಾವರಣ ಸೃಷ್ಟಿಯಾಗಿದೆಯೇ ಎಂಬ ಆತಂಕ ಶುರುವಾಗಿದೆ ಎಂದು ಸಾಹಿತಿ ಡಾ. ಕಮಲಾ ಹಂಪನಾ ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ‘ಮಹಾಕವಿ ಪಂಪ-ನಿನ್ನೆ-ಇಂದು-–ನಾಳೆ’ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಮೇಲೆತ್ತುವ ಕೆಲಸವಾಗಬೇಕು. 10ನೇ ಶತಮಾನದಲ್ಲಿ ಪಂಪ ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬ ಮಾತನ್ನು ಹೇಳಿದ್ದಾನೆ. ಇಂದು ಜಾತಿ ಹೆಸರಿನಲ್ಲಿ ಕುಬ್ಜರಾಗುತ್ತಿದ್ದೇವೆ. ಜಗತ್ತಿನಲ್ಲಿ ಎಲ್ಲಾ ಧರ್ಮಗಳು ಸಮಾನ. ಇದರಲ್ಲಿ ಮಾನವ ಧರ್ಮ ನಮ್ಮದಾಗಬೇಕು. ಆದರೆ, ದೇಶದಲ್ಲಿ ಇಂದಿನ ಪರಿಸ್ಥಿತಿ ಬೇರೆ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ. ಪ್ರಭುತ್ವಕ್ಕೆ ದಾಸರಾಗುತ್ತಿರುವುದರಿಂದ ಈ ವಿಷಮ ಸ್ಥಿತಿ ನಿರ್ಮಾಣವಾಗಿದೆ. ವೇದಿಕೆಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಭಯಪಡುವ ವಾತಾವರಣದಲ್ಲಿ ನಾವಿದ್ದೇವೆ. ಮನೆಗೆ

ಹೋಗುತ್ತೇನೋ ಇಲ್ಲವೋ ಎಂಬ ಭಯ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಹಿಂದಿನ ಕವಿಗಳು ಅರಸರ ಆಶ್ರಯ ಪಡೆದು ಅವರನ್ನೇ ಅವಿವೇಕಿಗಳು ಎಂದು ಧೈರ್ಯದಿಂದ ಹೇಳುತ್ತಿದ್ದರು. ಅಂದಿನ ಕವಿಗಳು ಅಷ್ಟರ ಮಟ್ಟಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಪಡೆದುಕೊಂಡಿದ್ದರು. ಇಂದಿನ ಪರಿಸ್ಥಿತಿಯಲ್ಲಿ ಮುಕ್ತವಾಗಿ ಮಾತನಾಡಲು ಹೆದರಿಕೆಯಾಗುತ್ತದೆ. ಇಂದಿನ ವಿದ್ಯಮಾನಗಳು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸಿವೆ ಎಂದು ಕಳವಳ ಹೊರಹಾಕಿದರು.

Follow Us:
Download App:
  • android
  • ios