ತಮರೈಕುಳಂ ಗ್ರಾಮದಲ್ಲಿ ಭೂಮಿ ಮಾರಾಟಕ್ಕೆ ಸಂಬಂಧಿಸಿದ ದಾಖಲೆಯೊಂದು ಬಹಿರಂಗಗೊಂಡಿದ್ದು, ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ. ಪನ್ನೀರ್’ಸೆಲ್ವಂ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಚೆನ್ನೈ: ತಮರೈಕುಳಂ ಗ್ರಾಮದಲ್ಲಿ ಭೂಮಿ ಮಾರಾಟಕ್ಕೆ ಸಂಬಂಧಿಸಿದ ದಾಖಲೆಯೊಂದು ಬಹಿರಂಗಗೊಂಡಿದ್ದು, ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ. ಪನ್ನೀರ್’ಸೆಲ್ವಂ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ತಮರೈಕುಳಂ ಗ್ರಾಮದಲ್ಲಿರುವ ತನ್ನ ಜಮೀನಿನಲ್ಲಿ ಓ ಪನ್ನೀರ್’ಸೆಲ್ವಂ ಬೃಹತ್ ಬಾವಿ ಕೊರೆಸಿದ್ದು, ಗ್ರಾಮಸ್ಥರ ಕೋಪಕ್ಕೆ ಕಾರಣವಾಗಿತ್ತು. ಬೃಹತ್ ಬಾವಿಯಿಂದ ಸುತ್ತುಮುತ್ತಲಿನ ಜಮೀನುಗಳಲ್ಲಿ ನೀರಿನ ಸಮಸ್ಯೆಯುಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.
ತನ್ನ ವರ್ಚಸ್ಸಿಗೆ ಧಕ್ಕೆಯಾಗುವ ಹಿನ್ನೆಲೆಯಲ್ಲಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ ಪನ್ನೀರ್’ಸೆಲ್ವಂ, ಬಾವಿಯಿರುವ ಆ ಜಾಗವನ್ನು ಸ್ಥಳೀಯರಿಗೆ ಮಾರುವುದಾಗಿ ಭರವಸೆ ನೀಡಿದ್ದರು.
ಬಾವಿಯಿರುವ ಆ ಜಾಗದೊಂದಿಗೆ, ಅದಕ್ಕೆ ಹೊಂದಿಕೊಂಡಿರುವ 40 ಎಕರೆ ತೆಂಗಿನ ತೋಟವನ್ನೂ ಖರೀದಿಸಬೇಕೆಂದೂ, ಪ್ರತಿ ಎಕರೆಗೆ ರೂ. 25 ಲಕ್ಷವನ್ನು ನಿಗದಿ ಮಾಡಿ 90 ದಿನಗಳೊಳಗೆ ಹಣ ಪಾವತಿಸಬೇಕೆಂದೂ, ಆ ಸಂದರ್ಭದಲ್ಲಿ ಪನ್ನೀರ್’ಸೆಲ್ವಂ ಶರತ್ತು ವಿಧಿಸಿದ್ದರು ಎನ್ನಲಾಗಿದೆ.
ಗ್ರಾಮಸ್ಥರು ಆ ಶರತ್ತನ್ನು ಒಪ್ಪಿಕೊಂಡು, ಹಣ ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದರು ಎನ್ನಲಾಗಿದೆ. ಆದರೆ ಈ ಮಧ್ಯೆ ಪನ್ನೀರ್’ಸೆಲ್ವಂ ಪತ್ನಿ ವಿಜಯಲಕ್ಷ್ಮಿ, ಆ ಜಮೀನನ್ನು ಸೆಲ್ವರಾಜ್ ಎಂಬವರಿಗೆ ಮಾರಾಟ ಮಾಡಿರುವ ದಾಖಲೆ ಹೊರಬಿದ್ದಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಪನ್ನೀರ್’ಸೆಲ್ವಂ ತಮಗೆ ವಂಚಿಸಿದ್ದಾರೆಂದು ಜನರು ಪ್ರತಿಭಟನೆ ನಡೆಸಿದ್ದಾರೆ.
