2015ರಲ್ಲಿ ಪ್ಯಾರಿಸ್‌ನಲ್ಲಿ ಬಲಿ ಪಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಕೇರಳಿಗನೊಬ್ಬನ ನಂಟಿದೆ ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಫ್ರಾನ್ಸ್‌ನ ಐವರು ಸದಸ್ಯರ ಪೊಲೀಸರ ತಂಡವೊಂದು ಕೇರಳಕ್ಕೆ ಆಗಮಿಸಿದೆ.
ಕೊಚ್ಚಿ[ಡಿ.06]: 2015ರಲ್ಲಿ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ 130 ಜನರನ್ನು ಬಲಿ ಪಡೆದ ಸ್ಫೋಟ ಪ್ರಕರಣಕ್ಕೆ ಕೇರಳಿಗನೊಬ್ಬನ ನಂಟು ಇರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಫ್ರಾನ್ಸ್‌ನ ಐವರು ಸದಸ್ಯರ ಪೊಲೀಸರ ತಂಡವೊಂದು ಕೇರಳಕ್ಕೆ ಆಗಮಿಸಿದೆ. ಆರೋಪಿಯನ್ನು ತ್ರಿಶ್ಯೂರ್ ಜಿಲ್ಲೆಯ ಥೊಡುಪುಜಾ ನಿವಾಸಿ ಸುಬಹಾನಿ ಹಾಜಾ ಮೊಯಿದ್ದೀನ್ ಎಂದು ಗುರುತಿಸಲಾಗಿದೆ. ಈತನ ವಿಚಾರಣೆಗೆ ಫ್ರಾನ್ಸ್ ಪೊಲೀಸರ ತಂಡ ಕೊಚ್ಚಿಯಲ್ಲಿ ತಮ್ಮನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡಿದ್ದು, ಶುಕ್ರವಾರದ ವರೆಗೂ ವಿಚಾರಣೆ ನಡೆಯಲಿದೆ ಎಂದು ಎನ್‌ಐಎ ಅಧಿಕಾರಿಯೊಬ್ಬರು ಹೇಳಿದ್ದಾರೆ.
2015ರಲ್ಲಿ ಪ್ಯಾರಿಸ್‌ನ ಥೀಯೇಟರ್‌ವೊಂದರ ಒಳಗಡೆ ನಡೆದ ದಾಳಿಯಲ್ಲಿ ಭಾಗಿಯಾದ ಉಗ್ರರ ಜೊತೆ ಸುಬಹಾನಿ ನಂಟು ಹೊಂದಿದ್ದಾನೆ ಎಂಬ ಸಂಗತಿ ಎನ್‌ಐಎ ತನಿಖೆಯಿಂದ ತಿಳಿದು ಬಂದಿತ್ತು. ಕೇರಳಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರು ಹಾಗೂ ಕೇರಳ ನ್ಯಾಯಾಧೀಶರನ್ನು ಗುರಿಯಾಗಿಸಿ ದಾಳಿ ನಡೆಸುವ ಐಸಿಸ್ ಉಗ್ರರ ಸಂಚನ್ನು ವಿಫಲಗೊಳಿಸಿದ್ದ ಎನ್‌ಐಎ, 2016ರಲ್ಲಿ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಸುಬಾಹಾನಿಯನ್ನು ಬಂಧಿಸಿತ್ತು. ಸಾಮಾಜಿಕ ಜಾಲತಾಣದ ಮೂಲಕ ಐಸಿಸ್ ಉಗ್ರರ ಸಂಘಟನೆಗೆ ಸೇರ್ಪಡೆಯಲಾಗಿದ್ದ ಈತ 2015ರಲ್ಲಿ ಚೆನ್ನೈನಿಂದ ಇಸ್ತಾಂಬುಲ್‌ಗೆ ತೆರಳಿ ಬಳಿಕ ಅಲ್ಲಿಂದ ಐಸಿಸ್ ನಿಯಂತ್ರಣದಲ್ಲಿರುವ ಇರಾಕ್‌ಗೆ ತೆರಳಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
