ಲಕ್ನೋ[ಜ.27]: ಜನವರಿ 26ರಂದು ಇಡೀ ದೇಶವೇ ಗಣರಾಜ್ಯೋತ್ಸವವನ್ನು ಆಚರಿಸಿದೆ. ದೆಹಲಿಯ ರಾಜ್‌ಪಥ್ ನಲ್ಲಿ ಭಾರತೀಯ ಸೇನೆಯು ಇಡೀ ವಿಶ್ವದೆದರು ತನ್ನ ಶಕ್ತಿ ಪ್ರದರ್ಶಿಸಿದೆ. ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧರಿರುವ ಯೋಧರ ವೀರತೆಗೆ ಪ್ರತಿಯೊಬ್ಬರೂ ತಲೆ ಬಾಗಿದ್ದಾರೆ. ಆದರೆ ಇತ್ತ ಮತ್ತೊಂದೆಡೆ ದೇಶದಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಸ್ವಾತಂತ್ರ್ಯ ಸೇನಾನಿಯ ಮಗಳು ರಸ್ತೆ ಬದಿಯಲ್ಲಿ ತನ್ನ ಜೀವನ ಸವೆಸಬೇಕಾದ ದುಸ್ಥಿತಿ ಬಂದೊದಗಿದೆ. ಇವರು ಕಳೆದ 40 ವರ್ಷದಿಂದ ಹುತಾತ್ಮರಾಗಿರುವ ತನ್ನ ತಂದೆಯ ಕುಟುಂಬಕ್ಕೆ ಸಿಗಬೇಕಾದ ಆರ್ಥಿಕ ಸಹಾಯ ಪಡೆದುಕೊಳ್ಳಲು ಹಗಲಿರುಳೆನ್ನದೆ ಓಡಾಡುತ್ತಿದ್ದಾರೆ.

ಉತ್ತರ ಪ್ರದೇಶದ ಶಾಹಜಹಾಂಪುರದ ರಾಜೇಶ್ವರೀ ಶುಕ್ಲಾ, ಸ್ವಾತಂತ್ರ್ಯ ಸೇನಾನಿ ಮಹೇಶ್ ನಾಥ್ ರವರ ಮಗಳು. ಇಡೀ ದೇಶ ಗಣರಾಜ್ಯೋತ್ಸವವನ್ನು ಸಂಭ್ರಮಿಸುತ್ತಿದ್ದ ಸಂದರ್ಭದಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ರಾಜೇಶ್ವರಿ, ತಮಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾರೆ.  ಅಲ್ಲದೇ ಸರ್ಕಾರ ತನ್ನ ತಂದೆ ಹುತಾತ್ಮರಾದ ಬಳಿಕ ಆರ್ಥಿಕ ಸಹಾಯ ಮಾಡದೆ, ಯಾವ ರೀತಿ ತಮ್ಮನ್ನು ನಡೆಸಿಕೊಂಡಿದೆ ಎಂಬುವುದನ್ನು ತೋರ್ಪಡಿಸಿಕೊಂಡಿದ್ದಾರೆ. 

ತಮ್ಮ ನೋವನ್ನು ಬಿಚ್ಚಿಟ್ಟ ರಾಜೇಶ್ವರಿ ಶುಕ್ಲಾ 'ನಾನು ನನ್ನ ತಂದೆಯನ್ನೇ ಅವಲಂಭಿಸಿದ್ದೇನೆ. ತಂದೆಯನ್ನು ಅಗಲಿ 40ಕ್ಕೂ ಹೆಚ್ಚು ವರ್ಷಗಳಾಗಿವೆ. ತಂದೆಯ ಪೆನ್ಶನ್ ನನಗೆ ಸಿಗಬೇಕಿತ್ತು. ಆದರೆ ಅದು ನನ್ನ ಕೈ ತಲುಪಿಲ್ಲ. ಅಧಿಕಾರಿಗಳು ನಾನು ವಿವಾಹಿತೆ ಎಂದು ಹಣ ನೀಡಲು ನಿರಾಕರಿಸಿದ್ದಾರೆ. ನಾನು ವಿವಾಹಿತಳಾಗಿರಬಹುದು ಆದರೆ ತಂದೆಯ ಉತ್ತರಾಧಿಕಾರಿ ನಾನೇ ಎಂಬುವುದು ಕೂಡಾ ಅಷ್ಟೇ ಸತ್ಯ. ಬ್ರಿಟಿಷರು ನನ್ನ ತಂದೆಯ ಕೈಗಳನ್ನು ತುಂಡರಿಸಿದ್ದರು. ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಓರ್ವ ಸ್ವಾತಂತ್ರ್ಯ ಸೇನಾನಿಯ ಮಗಳು ಇಂದು ನಲುಗುತ್ತಿದ್ದಾಳೆ. ಫುಟ್ ಪಾತ್ ಮೇಲೆ ಮಲಗಬೇಕಾಗಿದೆ. ಹೀಗೆ ಯಾಕಾಗುತ್ತದೆ. 40 ವರ್ಷಗಳಿಂದ ನಾನು ಅಲೆದಾಡುತ್ತಿದ್ದೇನೆ. ಕಾರ್ಯಕ್ರಮಗಳಲ್ಲಿ ಶಾಲು ಹೊದಿಸಿ ಸನ್ಮಾನಿಸುತ್ತಾರಷ್ಟೇ. 40 ವರ್ಷಗಳ ಅಲೆದಾಟದ ಬಳಿಕ ಪೆನ್ಶನ್ ಸಿಗುವ ಹಂತದಲ್ಲಿತ್ತು. ಅಷ್ಟರಲ್ಲಿ ಅಧಿಕಾರಿಗಳು ನಾನು ವಿವಾಹಿತಳು ಎಂಬ ಕಾರಣ ನೀಡಿ ಹಣ ನೀಡಲು ನಿರಾಕರಿಸಿದ್ದಾರೆ' ಎಂದಿದ್ದಾರೆ.