ಇದು ಸುಳ್ಸುದ್ದಿ, ಕೇವಲ ತಮಾಷೆಗಾಗಿ ನೀಡಲಾಗಿದೆ

ಭಾರತೀಯ ವಾಯುಪಡೆ ವಿಮಾನಗಳು ಪಾಕಿಸ್ತಾನದಲ್ಲಿನ ಉಗ್ರಗಾಮಿ ಶಿಬಿರಗಳ ಮೇಲೆ ಬಾಂಬ್‌ ದಾಳಿ ಮಾಡಿ ಉಗ್ರರನ್ನು ಕೊಂದಿದ್ದಕ್ಕೆ ಸಾಕ್ಷ್ಯ ಏನಿದೆ ಎಂದು ಕೇಳುವವರ ಸಂಖ್ಯೆ ನಿಧಾನವಾಗಿ ಹೆಚ್ಚಾಗತೊಡಗಿದೆ. ಇಂಥವರ ಬಾಯಿ ಮುಚ್ಚಿಸಲು ಕೇಂದ್ರ ಸರ್ಕಾರ ಉಪಾಯವೊಂದನ್ನು ಮಾಡಿದೆ. ವಾಯುಪಡೆ ನಡೆಸಿದ ಸಾಹಸದ ಬಗ್ಗೆ ಯಾರಿಗೆಲ್ಲಾ ಅನುಮಾನವಿದೆಯೋ ಅವರನ್ನೆಲ್ಲಾ ಖುದ್ದಾಗಿ ಬಾಂಬ್‌ ದಾಳಿ ನಡೆದ ಸ್ಥಳಕ್ಕೆ ಕಳುಹಿಸಲು ಸರ್ಕಾರ ನಿರ್ಧರಿಸಿದೆ.

ಇದಕ್ಕಾಗಿ ಉಚಿತ ಪ್ರವಾಸವನ್ನು ಆಯೋಜಿಸಿದೆ. ಉಗ್ರಗಾಮಿ ಶಿಬಿರ ನಾಶವಾಗಿರುವ ಬಗ್ಗೆ ಯಾರಿಗೆ ಶಂಕೆ ಇದೆಯೋ ಅವರನ್ನು ಗಡಿ ನಿಯಂತ್ರಣ ರೇಖೆ ಬಳಿಗೆ ಕರೆದೊಯ್ದು ಸುರಕ್ಷಿತವಾಗಿ ಪಾಕ್‌ ಆಕ್ರಮಿತ ಕಾಶ್ಮೀರದೊಳಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಂದ ಬಾಲಾಕೋಟ್‌ಗೆ ಹೋಗಿ ಘಟನಾ ಸ್ಥಳ ಪರಿಶೀಲಿಸಬಹುದು. ಅಲ್ಲಿ ಏನಾದರೂ ಅನಾಹುತವಾದರೆ ತಾನು ಹೊಣೆಯಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ ಎಂದು ಸುಳ್‌ಸುದ್ದಿ ಸಂಸ್ಥೆಗೆ ಮೂಲಗಳು ತಿಳಿಸಿವೆ.