ಬೆಂಗಳೂರು :  ಪ್ರಸಕ್ತ ಸಾಲಿನಿಂದಲೇ ರಾಜ್ಯದ ಎಲ್ಲಾ ಸರ್ಕಾರಿ ಪದವಿಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿಯರ ಶಿಕ್ಷಣ ಶುಲ್ಕವನ್ನು ಸರ್ಕಾರವೇ ಭರಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. 

ಕಾಲೇಜು ವಿದ್ಯಾರ್ಥಿನಿಯ ಶಿಕ್ಷಣ ಶುಲ್ಕವನ್ನು ಸರ್ಕಾರದಿಂದಲೇ ಭರಿಸುವ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಡಿಸಿದ್ದ ಚೊಚ್ಚಲ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದರು. ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 3.17 ಲಕ್ಷ ವಿದ್ಯಾರ್ಥಿನಿಯರಿಗೆ ಇದರ ಲಾಭ ಲಭ್ಯವಾಗಲಿದೆ. 

ಈ ಉದ್ದೇಶಕ್ಕಾಗಿ ಪ್ರತಿ ವರ್ಷ 95 ಕೋಟಿ ರು. ವೆಚ್ಚ ಭರಿಸಲಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ 1.84 ಲಕ್ಷ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದರೆ, ಪದವಿಪೂರ್ವ ಹಂತದಲ್ಲಿ 1.33 ಲಕ್ಷ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಸಂಪುಟ ಸಭೆಯ ನಂತರ ತಿಳಿಸಿದರು.