ಆಡಿಸ್‌ ಅಬಾಬಾ[ಮಾ.11]: ಇಥಿಯೋಪಿಯಾದ ವಿಮಾನವೊಂದು ಭಾನುವಾರ ಮುಂಜಾನೆ ರಾಜಧಾನಿಯಿಂದ ಹಾರಾಟ ಕೈಗೊಂಡ ಕೆಲವೇ ನಿಮಿಷದಲ್ಲಿ ಪತನಗೊಂಡಿದ್ದು, ಭಾರತದ ನಾಲ್ವರು ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 157 ಮಂದಿ ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಸಾವಿಗಿಡಾದವರಲ್ಲಿ 30 ದೇಶಗಳು ಪ್ರಯಾಣಿಕರು ಸೇರಿದ್ದಾರೆ.

149 ಪ್ರಯಾಣಿಕರು, 8 ಮಂದಿ ಸಿಬ್ಬಂದಿ ಇದ್ದ ವಿಮಾನ ಆಡಿಸ್‌ ಅಬಾಬಾ ವಿಮಾನ ನಿಲ್ದಾಣದಿಂದ ಹಾರಾಟ ಕೈಗೊಂಡ ಕೇವಲ 6 ನಿಮಿಷದಲ್ಲೇ ಪತನಗೊಂಡಿದೆ. ವಿಮಾನ ಆಡಿಸ್‌ ಅಬಾಬಾದಿಂದ ನೈರೋಬಿಗೆ ಪ್ರಯಾಣ ಬೆಳೆಸಿತ್ತು. ದುರ್ಘಟನೆಗೆ ಈಡಾದ ವಿಮಾನವನ್ನು ಇತ್ತೀಚೆಗಷ್ಟೇ ಖರೀದಿಸಲಾಗಿತ್ತು. ಆಡಿಸ್‌ ಅಬಾಬಾದಿಂದ 50 ಕಿ.ಮೀ. ದೂರದಲ್ಲಿರುವ ಡೆಬ್ರೆ ಝೀಟ್‌ ಪ್ರದೇಶದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ವಿಮಾನದಲ್ಲಿದ್ದ ಯಾರೂ ಬದುಕಿ ಉಳಿದಿಲ್ಲ ಎಂದು ಇಥಿಯೋಪಿಯಾ ವಿಮಾನಯಾನ ಸಂಸ್ಥೆ ತಿಳಿಸಿದೆ.

ಈ ಹಿಂದೆ 2010ರಲ್ಲಿ ಇಥಿಯೋಪಿಯಾದ ವಿಮಾನ ಹಾರಾಟ ಕೈಗೊಂಡ ಕೆಲವೇ ಹೊತ್ತಿನಲ್ಲಿ ಪತನಗೊಂಡು 90 ಮಂದಿ ಸಾವಿಗೀಡಾಗಿದ್ದರು.

ಇತ್ತೀಚೆಗಷ್ಟೇ ಖರೀದಿಸಿದ್ದ ವಿಮಾನ:

ಪತನಗೊಂಡ ವಿಮಾನ ಹೊಸದಾಗಿತ್ತು. 737​-8 ಮ್ಯಾಕ್ಸ್‌ ವಿಮಾನವನ್ನು ಇಥಿಯೋಪಿಯಾದ ವಿಮಾನಯಾನ ಸಂಸ್ಥೆ ನವೆಂಬರ್‌ನಲ್ಲಿ ಖರೀದಿಸಿತ್ತು. ಆಫ್ರಿಕಾದಲ್ಲೇ ಅತ್ಯುತ್ತಮ ವಿಮಾನ ನಿರ್ವಹಣೆಗೆ ಇಥಿಯೋಪಿಯಾ ವಿಮಾನಯಾನ ಸಂಸ್ಥೆ ಹೆಸರಾಗಿದೆ. ಅಲ್ಲದೇ ಆಫ್ರಿಕಾದಲ್ಲೇ ಅತಿದೊಡ್ಡ ವಿಮಾನಯಾನ ಸೇವೆ ನೀಡುತ್ತಿರುವುದಾಗಿ ಇಥಿಯೋಪಿಯಾ ಹೇಳಿಕೊಂಡಿದೆ.