ಈ ಎಲ್ಲಾ ಬೆಳವಣಿಗೆಗಳಿಗೆ ಸಿದ್ದರಾಮಯ್ಯ ಅವರ ಆಪ್ತರೆನಿಸಿದ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಸಾರಥ್ಯ ವಹಿಸಿದ್ದಾರೆ. ಶನಿವಾರ ಸಂಜೆ ಕೆಂಗೇರಿಯಲ್ಲಿ ಎಸ್‌'ಡಿಎಂ ಪ್ರಕೃತಿ ಚಿಕಿತ್ಸಾಲಯದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿದ ಇಬ್ರಾಹಿಂ ಅವರು ಸುಮಾರು ಎರಡು ತಾಸುಗಳವರೆಗೂ ಮಾತುಕತೆ ನಡೆಸಿದರು.

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರೆನಿಸಿದ್ದ ಎಚ್.ವಿಶ್ವನಾಥ್, ಸಿ.ಎಂ.ಇಬ್ರಾಹಿಂ, ಶಾಸಕರಾದ ಸತೀಶ್ ಜಾರಕಿಹೊಳಿ ಹಾಗೂ ಮಾಲೀಕಯ್ಯ ಗುತ್ತೇದಾರ್ ಅವರು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮಂಗಳವಾರ ಭೇಟಿ ಮಾಡಲು ಸಮಯ ನಿಗದಿಪಡಿಸಿಕೊಂಡಿದ್ದಾರೆ. ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವ ಯೋಜನೆಯ ಭಾಗವಾಗಿ ಮಂಗಳವಾರ ಮಧ್ಯಾಹ್ನ 3ಕ್ಕೆ ಬೆಂಗಳೂರಿನಲ್ಲಿ ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ನಾಯಕರ ಈ ತಂಡ ಭೇಟಿ ಮಾಡಲಿದೆ. ಎಚ್.ಡಿ.ಕೆ. ಅವರೊಂದಿಗಿನ ಮಾತುಕತೆಯ ನಂತರ ಈ ತಂಡ ದೇವೇಗೌಡರನ್ನು ಭೇಟಿ ಮಾಡಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ತಮ್ಮ ಬಗ್ಗೆ ಮುನಿಸಿಕೊಂಡಿರುವ ನಾಯಕರನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಸಮಾಧಾನಪಡಿಸುವ ಪ್ರಯತ್ನ ಆರಂಭಿಸಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ನಾಯಕರ ಪೈಕಿ ವಿಶ್ವನಾಥ್‌ ಜೆಡಿಎಸ್‌ ಸೇರುವುದು ಬಹುತೇಕ ನಿಶ್ಚಿತವಾಗಿದೆ. ವಿಶ್ವನಾಥ್‌ ಅವರೊಂದಿಗೆ ಕಾಂಗ್ರೆಸ್‌ನ ಇಬ್ರಾಹಿಂ, ಸತೀಶ್‌ ಜಾರಕಿಹೊಳಿ ಹಾಗೂ ಮಾಲೀಕಯ್ಯ ಗುತ್ತೇದಾರ್‌'ರಂತಹ ನಾಯಕರು ಜೆಡಿಎಸ್‌ನತ್ತ ಹೆಜ್ಜೆಹಾಕುವ ಉಮೇದಿ ಹೊಂದಿದ್ದು, ಈ ಬಗ್ಗೆ ಮಾತುಕತೆ ನಡೆಸಲು ಮಂಗಳವಾರದ ಸಭೆ ನಿಗದಿಯಾಗಿದೆ.

ಈ ಸಭೆಯಲ್ಲಿ ಕಾಂಗ್ರೆಸ್‌ ನಾಯಕರು ಮಾತ್ರವಲ್ಲದೆ, ಜೆಡಿಎಸ್‌'ನ ನಾಯಕ ಫಾರೂಕ್‌, ಶಾಸಕರಾದ ಮಧು ಬಂಗಾರಪ್ಪ, ಸಾ.ರಾ.ಮಹೇಶ್‌ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್‌'ನ ಈ ನಾಯಕರು ಮಾತ್ರವಲ್ಲದೆ, ಇನ್ನೂ ಹಲವು ನಾಯಕರು ಜೆಡಿಎಸ್‌ನತ್ತ ಸಾಗುವ ಇಚ್ಛೆ ಹೊಂದಿದ್ದು, ಅವರಿಗೂ ಪಕ್ಷ ಸೇರ್ಪಡೆಯ ಸಾಧ್ಯತೆ ಕುರಿತು ಕುಮಾರಸ್ವಾಮಿ ಅವರೊಂದಿಗಿನ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಇಬ್ರಾಹಿಂ ಸಾರಥ್ಯ: ಅಚ್ಚರಿಯೆಂದರೆ, ಈ ಎಲ್ಲಾ ಬೆಳವಣಿಗೆಗಳಿಗೆ ಸಿದ್ದರಾಮಯ್ಯ ಅವರ ಆಪ್ತರೆನಿಸಿದ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಸಾರಥ್ಯ ವಹಿಸಿದ್ದಾರೆ. ಶನಿವಾರ ಸಂಜೆ ಕೆಂಗೇರಿಯಲ್ಲಿ ಎಸ್‌'ಡಿಎಂ ಪ್ರಕೃತಿ ಚಿಕಿತ್ಸಾಲಯದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿದ ಇಬ್ರಾಹಿಂ ಅವರು ಸುಮಾರು ಎರಡು ತಾಸುಗಳವರೆಗೂ ಮಾತುಕತೆ ನಡೆಸಿದರು. ಇದಾದ ನಂತರ ನೇರವಾಗಿ ಅವರು ಕೆ.ಆರ್‌. ನಗರಕ್ಕೆ ಸಂಚಾರ ಬೆಳೆಸಿ ತಡರಾತ್ರಿವರೆಗೂ ಕಾಂಗ್ರೆಸ್‌ ತೊರೆಯಲು ಸಜ್ಜಾಗಿರುವ ಮಾಜಿ ಸಂಸದ ವಿಶ್ವನಾಥ್‌ ಅವರೊಂದಿಗೆ ಮಾತುಕತೆ ನಡೆಸಿದರು. ಈ ಎಲ್ಲಾ ಬೆಳವಣಿಗೆಗಳು ಮಂಗಳವಾರದ ಕುಮಾರಸ್ವಾಮಿ ಅವರ ಭೇಟಿಯ ಕುರಿತೇ ನಡೆದಿವೆ. ಮೂಲಗಳ ಪ್ರಕಾರ ಕುಮಾರಸ್ವಾಮಿ ಅವರೊಂದಿಗಿನ ಮಂಗಳವಾರದ ಭೇಟಿಯ ನಂತರ ಮಹತ್ವದ ಬೆಳವಣಿಗೆಗಳು ನಡೆಯಲಿದ್ದು, ಹಲವು ಕಾಂಗ್ರೆಸ್‌ ಶಾಸಕರು ಜೆಡಿಎಸ್‌ನತ್ತ ಮುಖ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ
epaper.kannadaprabha.in