ಮೇ ಸಾಯಿ (ಥಾಯ್ಲೆಂಡ್‌): ಕಳೆದ ಎರಡು ವಾರಗಳಿಂದ ಥಾಯ್ಲೆಂಡ್‌ನ ಥಮ್‌ ಲುವಾಂಗ್‌ ಗುಹೆಯಲ್ಲಿ ಪ್ರವಾಹದ ನೀರಿನ ಮಧ್ಯೆ ಸಿಕ್ಕಿಹಾಕಿಕೊಂಡಿರುವ ಫುಟ್ಬಾಲ್‌ ತಂಟದ 12 ಬಾಲಕರು ಹಾಗೂ ಹಾಗೂ ಅವರ ಕೋಚ್‌ನ ರಕ್ಷಣಾ ಕಾರ್ಯದ ವೇಳೆ ನೌಕಾ ಪಡೆಯ ಮಾಜಿ ಡೈವರ್‌ (ಮುಳುಗು ತಜ್ಞ)ವೊಬ್ಬರು ಪ್ರಾಣಕಳೆದುಕೊಂಡಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮನ್‌ ನಾಟ್‌ ಎನ್ನುವವರು ಆಮ್ಲಜನಕವನ್ನು ಪೂರೈಸುವ ಉದ್ದೇಶದಿಂದ ನೀರಿನಲ್ಲಿ ಇಳಿದಿದ್ದ ವೇಳೆ ಉಸಿರುಗಟ್ಟಿಸಾವನ್ನಪ್ಪಿದ್ದಾರೆ. ನುರಿತ ಡೈವರ್‌ ಆಗಿದ್ದ ಸಮನ್‌, ಅಪಾಯವನ್ನೂ ಲೆಕ್ಕಿಸದೇ ಗುರುವಾರ ಗುಹೆಯ ಒಳಕ್ಕೆ ಇಳಿದಿದ್ದರು. ಆದರೆ, ಹಿಂದಿರುಗುವ ವೇಳೆ ಏರ್‌ ಬ್ಯಾಗ್‌ ಖಾಲಿಯಾಗಿ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ್ದಾರೆ. 

ಸಮನ್‌ ಅವರ ಸಹಾಯಕ್ಕೆ ಸ್ನೇಹಿತ ಧಾವಿಸಿದರೂ ಪ್ರಯೋಜನವಾಗಲಿಲ್ಲ. ಈ ಘಟನೆಯಿಂದಾಗಿ ಗುಹೆಯಲ್ಲಿ ರಕ್ಷಣಾ ಕಾರ್ಯಾಚರಣೆ ಎಷ್ಟುಅಪಾಯಕಾರಿ ಹಾಗೂ ರಕ್ಷಣಾ ತಂಡದ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಏಳುವಂತೆ ಮಾಡಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ನೌಕಾ ಪಡೆಯ ಡೈವರ್‌ಗಳು, ಸೇನಾ ಸಿಬ್ಬಂದಿ ಸೇರಿ 1,000 ಮಂದಿ ಪಾಲ್ಗೊಂಡಿದ್ದಾರೆ.