ಬೆಂಗಳೂರು[ಜೂ.15]: ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ಅವರಿಗೆ ಅರಳು-ಮರುಳು ಆರಂಭವಾಗಿರುವ ಕಾರಣ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ನೂತನ ಸಚಿವ ಆರ್‌.ಶಂಕರ್‌ ಲೇವಡಿ ಮಾಡಿದ್ದಾರೆ.

ಶುಕ್ರವಾರ ರಾಜಭವನದಲ್ಲಿ ನಡೆದ ಪ್ರಮಾಣ ವಚನ ಕಾರ್ಯಕ್ರಮ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ತಮ್ಮನ್ನು ಅವಕಾಶವಾದಿ ಎಂದು ಹೇಳುವುದಾದರೆ ಹೇಳಲಿ. ಅವರಿಗೆ ಈ ವಯಸ್ಸಿನಲ್ಲಿ ಆಸೆ ಇದ್ದರೆ ನಮಗೆ ಇರುವುದಿಲ್ಲವೇ ಎಂದು ತಿರುಗೇಟು ನೀಡಿದರು.

ಕಳೆದ ಚುನಾವಣೆಯಲ್ಲಿ ಅವರು ಟಿಕೆಟ್‌ ಪಡೆದುಕೊಂಡಿದ್ದರು. ಆದರೆ, ಜನ ಅವರನ್ನು ತಿರಸ್ಕರಿಸಿದ್ದಾರೆ. ಆದರೂ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಜನಸೇವೆ ಮಾಡಲು ನಮಗೆ ಅವಕಾಶ ಬೇಡವೇ? ನನ್ನ ಹಕ್ಕು ಪ್ರತಿಪಾದನೆ ಮಾಡುವುದು ಅವಕಾಶವಾದಿತನವಾಗುತ್ತದೆಯೇ? ಹಾಗಾದರೆ ನಾನು ಸನ್ಯಾಸಿಯಾಗಬೇಕಾಗಿತ್ತು. ನಾನು ಯಾಕೆ ರಾಜಕೀಯದಲ್ಲಿ ಇರುತ್ತಿದ್ದೆ ಎಂದು ಟಾಂಗ್‌ ಕೊಟ್ಟಅವರು, ಮೈತ್ರಿ ಸರ್ಕಾರ ಗಟ್ಟಿಮಾಡಲು ನಾವು ಒಟ್ಟಿಗೆ ಸೇರಿದ್ದೇವೆ. ನಾವು ಐದು ವರ್ಷ ಸರ್ಕಾರ ನಡೆಸಲಿದ್ದೇವೆ ಎಂದರು.