ಮರೆವು ತಂದ ಎಡವಟ್ಟು ಮಹಾರಾಷ್ಟ್ರದ ಪುಣೆ ನಿವಾಸಿ ಬ್ಯಾಗ್‌ನಲ್ಲಿದ್ದ 2 ಗುಂಡುಗಳು, ಪಿಸ್ತೂಲಿನ ಬಿಡಿಭಾಗಗಳು | ಸಿಆರ್‌ಪಿಎಫ್ ತಪಾಸಣೆ ವೇಳೆ ಪತ್ತೆ

ಬೆಂಗಳೂರು: ಕೆಲ ದಿನಗಳ ಹಿಂದೆ ಜೀವಂತ ಗುಂಡುಗಳು ಹಾಗೂ ಪಿಸ್ತೂಲಿನ ಬಿಡಿ ಭಾಗಗಳನ್ನು ಬ್ಯಾಗಿನಲ್ಲಿಟ್ಟುಕೊಂಡು ವಿಮಾನ ಪ್ರಯಾಣಕ್ಕೆ ಯತ್ನಿಸಿದ ಆರೋಪದ ಮೇರೆಗೆ ಮಾಜಿ ಸೈನಿಕರೊಬ್ಬರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿರುವ ಘಟನೆ ನಡೆದಿದೆ.

ಮಹಾರಾಷ್ಟ್ರದ ಬಡೆ ಧ್ಯಾನೇಶ್ವರ್ ನ.2ರಂದು ನಗರದಿಂದ ಸ್ಪೈಸ್ ಜೆಟ್ ಎಸ್ ಜಿ-24 ವಿಮಾನದಲ್ಲಿ ಪುಣೆಗೆ ತೆರಳುವ ವೇಳೆ ಈ ಘಟನೆ ನಡೆದಿದೆ. ವಿಮಾನ ಪ್ರಯಾಣಕ್ಕೆ ಆಗಮಿಸಿದ ಧ್ಯಾನೇಶ್ವರ್ ಅವರ ಬ್ಯಾಗ್ ಅನ್ನು ವಿಮಾನ ನಿಲ್ದಾಣ ಸಿಐಎಸ್‌ಎಫ್ ಸಿಬ್ಬಂದಿ ಪರಿಶೀಲಿಸಿದರು. ಆಗ 2 ಜೀವಂತ ಗುಂಡುಗಳು, 2 ಖಾಲಿ ಕಾಟ್ರಿಡ್ಜ್‌ಗಳು ಹಾಗೂ 5.56 ಪಿಸ್ತೂಲ್‌ನ ಬಿಡಿಭಾಗಗಳು ಪತ್ತೆಯಾದವು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ತಕ್ಷಣವೇ ಅವರನ್ನು ಪೊಲೀಸರು ಸಿಐಎಸ್‌ಎಫ್ ಸಿಬ್ಬಂದಿ ವಶಕ್ಕೆ ನೀಡಿದರು.

ವಿಚಾರಣೆ ನಂತ†ರ ಧ್ಯಾನೇಶ್ವರ್ ಅವರು ಮಾಜಿ ಸೈನಿಕರು ಎಂಬುದು ಗೊತ್ತಾಯಿತು. ಬಳಿಕ ಅವರಿಗೆ ನಿಷೇಧಿತ ವಸ್ತುಗಳನ್ನು ವಿಮಾನದಲ್ಲಿ ಸಾಗಿಸಬಾರದು ಎಂದು ತಿಳುವಳಿಕೆ ಹೇಳಿ, ಠಾಣಾ ಜಾಮೀನು ಮಂಜೂರು ಮಾಡಿ ಬಿಡುಗಡೆಗೊಳಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

10 ವರ್ಷದ ಹಿಂದೆ ಸ್ನೇಹಿತ ಕೊಟ್ಟಿದ್ದು:

‘ನಾನು ಭಾರತೀಯ ಸೇವೆಯಲ್ಲಿ ಸೇವೆ ಸಲ್ಲಿಸಿ ಬಳಿಕ ನಿವೃತ್ತನಾದೆ. 96 ವರ್ಷದ ಪರಿಚಿತ ಮಾಜಿ ಸೈನಿಕರೊಬ್ಬರು 10 ವರ್ಷಗಳ ಹಿಂದೆ ನನಗೆ ಈ ಗುಂಡುಗಳು ಹಾಗೂ ಪಿಸ್ತೂಲ್‌ನ ಬಿಡಿಭಾಗಗಳನ್ನು ಕೊಟ್ಟಿದ್ದರು. ಅವುಗಳನ್ನು ಬ್ಯಾಗ್‌ನಲ್ಲೇ ಇಟ್ಟುಕೊಂಡಿದ್ದೆ’ ಎಂದು ವಿಚಾರಣೆ ವೇಳೆ ಧ್ಯಾನೇಶ್ವರ್ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

‘ಇಂದಿರಾ ನಗರದಲ್ಲಿ ನನ್ನ ಮಗಳ ಕುಟುಂಬ ವಾಸವಾಗಿದ್ದು, ಅ.28ರಂದು ಪುಣೆಯಿಂದ ರೈಲಿನಲ್ಲಿ ಮಗಳ ಭೇಟಿಗೆ ನಗರಕ್ಕೆ ಬಂದಿದ್ದೆ. ಕೆಲ ದಿನಗಳ ಮಗಳ ಜತೆ ಇದ್ದು ವಿಮಾನದಲ್ಲಿ ಪುಣೆಗೆ ಹೊರಟ್ಟಿದ್ದೆ. ಆದರೆ ಬ್ಯಾಗ್‌ನಲ್ಲಿ ಜೀವಂತ ಗುಂಡುಗಳು ಇರುವ ಸಂಗತಿ ಮರೆತು ಹೋಗಿತ್ತು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪರವಾನಿಗೆ ಇಲ್ಲದೆ ಗುಂಡುಗಳನ್ನು ಇಟ್ಟುಕೊಂಡಿದ್ದ ಧ್ಯಾನೇಶ್ವರ್ ವಿರುದ್ಧ ಸಿಐಎಸ್‌ಎಫ್ ಎಲ್.ಕೆ.ಶಿಥೋ ದೂರು ಕೊಟ್ಟಿದ್ದಾರೆ. ದೂರಿನನ್ವಯ ಆರೋಪಿಯನ್ನು ಬಂಧಿಸಿ, ನಂತರ ಠಾಣಾ ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಯಿತು. ಜಪ್ತಿ ಮಾಡಲಾದ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.