Asianet Suvarna News Asianet Suvarna News

ಪಿ.ಸಿ.ಘೋಷ್ ದೇಶದ ಮೊದಲ ಲೋಕಪಾಲ : ಇತರೆ 8 ಸದಸ್ಯರ ನೇಮಕ

ಲೋಕಪಾಲ ಸಂಸ್ಥೆಯ ಮುಖ್ಯಸ್ಥರನ್ನಾಗಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾ. ಪಿ.ಸಿ.ಘೋಷ್‌ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. 

Former SC judge P C Ghose appointed Indias first Lokpal
Author
Bengaluru, First Published Mar 20, 2019, 2:28 PM IST

ನವದೆಹಲಿ :  ಭ್ರಷ್ಟಾಚಾರ ನಿಯಂತ್ರಣದಲ್ಲಿ ಬ್ರಹ್ಮಾಸ್ತ್ರ ಎಂದೇ ಪರಿಗಣಿತ ಲೋಕಪಾಲ ಸಂಸ್ಥೆಯ ಮುಖ್ಯಸ್ಥರನ್ನಾಗಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾ. ಪಿ.ಸಿ.ಘೋಷ್‌ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಮಾಡಿದ್ದ ಶಿಫಾರಸಿಗೆ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಸಹಿ ಹಾಕಿದ್ದಾರೆ. ಇದರೊಂದಿಗೆ ಹಲವು ದಶಕಗಳಿಂದ ವ್ಯಕ್ತವಾಗಿದ್ದ ಲೋಕಪಾಲ ನೇಮಕದ ಬೇಡಿಕೆ ಈಡೇರಿದಂತೆ ಆಗಿದೆ.

ನೂತನ ಲೋಕಪಾಲರ ನೇಮಕವನ್ನು ವಿವಿಧ ರಾಜಕೀಯ ಪಕ್ಷಗಳು ಮತ್ತು ಜನಸಾಮಾನ್ಯರು ಸ್ವಾಗತಿಸಿದ್ದಾರೆ. ಇದು ರಾಜಕೀಯ ನಾಯಕರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರವನ್ನು ನಿಯಂತ್ರಿಸಲು ನೆರವಾಗಲಿದೆ ಎಂದು ಆಶಿಸಿದ್ದಾರೆ.

ನೂತನ ಲೋಕಪಾಲ: ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಪಾಲ ಸಂಸ್ಥೆಯನ್ನು ಕಾಯ್ದೆಬದ್ಧವಾಗಿ ಸ್ಥಾಪಿಸಿ ಐದು ವರ್ಷ ಕಳೆದರೂ ಲೋಕಪಾಲರ ನೇಮಿಸದೇ ಟೀಕೆ ಎದುರಿಸುತ್ತಿದ್ದ ಕೇಂದ್ರ ಸರ್ಕಾರ, ಕೊನೆಗೂ ದೇಶದ ಮೊದಲ ಲೋಕಪಾಲರನ್ನಾಗಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಶ್ಚಿಮ ಬಂಗಾಳ ಮೂಲದ ಪಿನಾಕಿ ಚಂದ್ರ ಘೋಷ್‌ ಅವರನ್ನು ನೇಮಕ ಮಾಡಿದೆ.

ಜೊತೆಗೆ ಸಮಿತಿಯಲ್ಲಿನ ಇತರೆ ನ್ಯಾಯಾಂಗದ ಸದಸ್ಯರಾಗಿ ನ್ಯಾ. ದಿಲೀಪ್‌ ಬಿ. ಭೋಸಲೆ, ಪ್ರದೀಪ್‌ ಕುಮಾರ್‌ ಮೊಹಾಂತಿ, ಅಭಿಲಾಶಾ ಕುಮಾರಿ ಮತ್ತು ಅಜಯ್‌ ಕುಮಾರ್‌ ತ್ರಿಪಾಠಿ ಅವರನ್ನು ನೇಮಿಸಲಾಗಿದೆ. ಇನ್ನು ಸಮಿತಿಯಲ್ಲಿನ ನ್ಯಾಯಾಂಗೇತರ ಸದಸ್ಯರಾಗಿ ಸಶಸ್ತ್ರ ಸೀಮಾದಳದ ಮಾಜಿ ಮುಖ್ಯಸ್ಥೆ ಅರ್ಚನಾ ರಾಮಸುಂದರಂ, ಮಹಾರಾಷ್ಟ್ರ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ದಿನೇಶ್‌ ಕುಮಾರ ಜೈನ್‌, ಮಹೇಂದ್ರ ಸಿಂಗ್‌ ಮತ್ತು ಇಂದ್ರಜೀತ್‌ ಪ್ರಸಾದ್‌ ಗೌತಮ್‌ ಅವರನ್ನು ಸರ್ಕಾರ ನೇಮಿಸಿದೆ.

ಹೋರಾಟದ ಹಿನ್ನೆಲೆ:  1963ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಮೊದಲ ಬಾರಿಗೆ ಲೋಕಪಾಲ ನೇಮಕದ ಪ್ರಸ್ತಾಪ ಮಾಡಲಾಗಿತ್ತು. ನಂತರದ ದಶಕಗಳಲ್ಲಿ ಹಲವು ಬಾರಿ ಈ ಕುರಿತ ಕರಡು ಮಸೂದೆಗಳು ಸಂಸತ್ತಿನಲ್ಲಿ ಮಂಡನೆಯಾಗಿದ್ದರೂ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಆದರೆ ಭ್ರಚ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಹೋರಾಟ ನಡೆಸಿದ ನಂತರ 2013ರಲ್ಲಿ ಲೋಕಪಾಲ ಕಾಯ್ದೆ ಜಾರಿಗೊಳಿಸಲಾಗಿತ್ತು. ಅದರ ಪ್ರಕಾರ ರಾಷ್ಟ್ರಮಟ್ಟದಲ್ಲಿ ಲೋಕಪಾಲ ಸಂಸ್ಥೆಯನ್ನೂ, ಎಲ್ಲ ರಾಜ್ಯಗಳಲ್ಲಿ ಲೋಕಾಯುಕ್ತ ಸಂಸ್ಥೆಯನ್ನೂ ಸ್ಥಾಪಿಸಬೇಕಿತ್ತು. ಆದರೆ ನಾನಾ ಕಾರಣಗಳಿಂದಾಗಿ ಲೋಕಪಾಲರ ನೇಮಕ ಇಲ್ಲಿಯವರೆಗೆ ಆಗಿರಲಿಲ್ಲ.

ಮೊದಲ ಲೋಕಪಾಲ ಘೋಷ್‌ ಯಾರು?

ಪಶ್ಚಿಮ ಬಂಗಾಳ ಮೂಲದ ಪಿನಾಕಿ ಚಂದ್ರ ಘೋಷ್‌ ಅವರು 1997ರಲ್ಲಿ ಕೊಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನ್ಯಾಯಾಂಗ ಸೇವೆಗೆ ಕಾಲಿಟ್ಟಿದ್ದರು. 2013ರಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದು, ಕೆಲ ವರ್ಷಗಳ ಹಿಂದೆ ನಿವೃತ್ತಿಯಾಗಿದ್ದಾರೆ. ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ ಇವರು ಭ್ರಷ್ಟಾಚಾರ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾ ಅಪರಾಧಿ ಎಂದು ತೀರ್ಪು ನೀಡಿದ್ದರು.

ಲೋಕಪಾಲ ಎಂದರೇನು?

2013ರ ಲೋಕಪಾಲ ಕಾಯ್ದೆ ಪ್ರಕಾರ, ಸಾರ್ವಜನಿಕ ಸೇವೆಯಲ್ಲಿರುವವರ ವಿರುದ್ಧ ಕೇಳಿಬರುವ ಭ್ರಷ್ಟಾಚಾರದ ತನಿಖೆಗೆ ಇರುವ ಸಂಸ್ಥೆ. ಈ ಸಂಸ್ಥೆಯು ಓರ್ವ ಮುಖ್ಯಸ್ಥ ಮತ್ತು ಇತರೆ 8 ಸದಸ್ಯರನ್ನು ಹೊಂದಿರುತ್ತದೆ. ಮುಖ್ಯಸ್ಥರು ಸುಪ್ರೀಂಕೋರ್ಟ್‌ನ ಹಾಲಿ ಅಥವಾ ನಿವೃತ್ತ ಜಡ್ಜ್‌ ಅಥವಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿರಬೇಕು. ಇತರೆ ಸದಸ್ಯರು 25 ವರ್ಷ ಮೇಲ್ಪಟ್ಟವರಾಗಿರಬೇಕು. ಭ್ರಷ್ಟಾಚಾರ ನಿಗ್ರಹ ನೀತಿ, ಗುಪ್ತಚರ, ಸಾರ್ವಜನಿಕ ಆಡಳಿತ, ಹಣಕಾಸು, ಕಾನೂನು ಮತ್ತು ನಿರ್ವಹಣೆ ವಿಷಯದಲ್ಲಿ ಅನುಭವ ಹೊಂದಿರಬೇಕು.

ಭ್ರಷ್ಟಾಚಾರದ ತನಿಖೆ ಹೇಗೆ?

ತನ್ನ ವ್ಯಾಪ್ತಿಗೆ ಬರುವ ವ್ಯಕ್ತಿಗಳ ವಿರುದ್ಧ ದಾಖಲಾದ ಭ್ರಷ್ಟಾಚಾರದ ದೂರು ಖಚಿತ ಎಂದು ಕಂಡುಬಂದಲ್ಲಿ, ತಕ್ಷಣವೇ ಅಂಥ ವ್ಯಕ್ತಿ ವಿರುದ್ಧ ಶಿಸ್ತು ಕ್ರಮಕ್ಕೆ ಕೇಂದ್ರ ಸರ್ಕಾರಕ್ಕೆ ಸೂಚಿಸಬಹುದು ಮತ್ತು ಕೇಂದ್ರ ಸರ್ಕಾರ ರಚಿಸುವ ವಿಶೇಷ ನ್ಯಾಯಾಲಯದಲ್ಲಿ ಕೇಸು ದಾಖಲಿಸಬಹುದು. ದೂರು ದಾಖಲಾದ 30 ದಿನಗಳಲ್ಲಿ ಪ್ರಾಥಮಿಕ ತನಿಖೆ ಪೂರ್ಣಗೊಳ್ಳಬೇಕು. 6 ತಿಂಗಳಲ್ಲಿ ಪೂರ್ಣ ತನಿಖೆ ಮುಗಿಯಬೇಕು. ಇದನ್ನು ಗರಿಷ್ಠ 6 ತಿಂಗಳು ವಿಸ್ತರಿಸಬಹುದು.

ಯಾರ್ಯಾರ ವಿರುದ್ಧ ತನಿಖೆ?

ಮಾಜಿ ಪ್ರಧಾನಿ, ಹಾಲಿ ಮತ್ತು ಮಾಜಿ ಸಚಿವರು, ಹಾಲಿ ಮತ್ತು ಮಾಜಿ ಸಂಸದರು, ಎಲ್ಲಾ ಗ್ರೂಪ್‌ ಎ ದರ್ಜೆಯ ಕೇಂದ್ರ ಸರ್ಕಾರಿ ನೌಕರರು, ಸಾರ್ವಜನಿಕ ವಲಯದ ಉದ್ಧಿಮೆಗಳಲ್ಲಿನ ಎ ದರ್ಜೆಗೆ ಸಮನಾದ ಅಧಿಕಾರಿಗಳು ಮತ್ತು ಸರ್ಕಾರಿ ಸಂಸ್ಥೆಗಳು, ಸರ್ಕಾರ ಮತ್ತು ಸಾರ್ವಜನಿಕರಿಂದ ನೆರವು ಸ್ವೀಕರಿಸುವ ಎನ್‌ಜಿಒಗಳ ನಿರ್ದೇಶಕರು ಮತ್ತು ಅಧಿಕಾರಿಗಳು ವಿರುದ್ದ ಲೋಕಪಾಲ ತನಿಖೆ ನಡೆಸಬಹುದು. ಮೇಲ್ಕಂಡ ಯಾವುದೇ ವ್ಯಕ್ತಿಗಳ ವಿರುದ್ಧ ತನಿಖೆಗೆ ಲೋಕಪಾಲರು, ಸರ್ಕಾರದ ಪೂರ್ವಾನುಮತಿ ಪಡೆಯಬೇಕಾದ ಅಗತ್ಯವಿಲ್ಲ.

Follow Us:
Download App:
  • android
  • ios