ಒಂದು ಕಾಲದಲ್ಲಿ ಬಿಜೆಪಿಯಿಂದ ಸಕಲ ಗೌರವ ಪಡೆದುಕೊಂಡಿದ್ದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ವಿವಾದಿತ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಸವಾಲೆಸೆಯುವ ಬರದಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. 

ಬಾಗಲಕೋಟೆ(ಜು.8] ಪ್ರಧಾನಿ ಮೋದಿಗೆ, ಬಿಜೆಪಿ ನಾಯಕರಿಗೆ ಧಮ್‌ ಇದ್ರೆ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಪಾಯ ಹಾಕಿ ಲೋಕಸಭಾ ಚುನಾವಣಾ ಪ್ರಚಾರಕ್ಕಿಳಿಯಲಿ ಎಂದು ಮಾಜಿ ಸಚಿವ , ಜೆಡಿಎಸ್‌ ಮುಖಂಡ ಎಸ್‌.ಕೆ.ಬೆಳ್ಳುಬ್ಬಿ ಹೇಳಿದ್ದಾರೆ.

ಬಿಜೆಪಿಯವರು ಬಾಬ್ರಿ ಮಸೀದಿ ಧ್ವಂಸದ ವೇಳೆ ಯುವಕರನ್ನು ಬಲಿ ನೀಡಿದರು, ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರನ್ನು ಬಲಿ ನೀಡಿದರು. ರಾಮ ಮಂದಿರದ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಯುವಕರನ್ನು ಪ್ರಚೋದಿಸಿ ಅವರಿಂದ ತಪ್ಪು ಕೆಲಸ ಮಾಡಿಸಿ ಜೈಲಿಗೆ ಹೋಗುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇವರ ನಡೆಯಿಂದ ಉತ್ತರ ಪ್ರದೇಶ ದಲ್ಲಿ ಬ್ರಾಹ್ಮಣ ಮನೆಗಳು ಸತ್ಯಾನಾಶವಾಗಿವೆ. ಮುಂದಿನ ಲೋಕಸಭಾ ಚುನಾವಣೆಗೆ ರಾಮಮಂದಿರ ವಿಷಯ ಬದಿಗಿಟ್ಟು ಬರಲಿ ನೋಡೋಣ.. ನಾವು ಮಾತ್ರ ಜಾತ್ಯತೀತವಾಗಿ ಚುನಾವಣೆ ಎದುರಿಸ್ತೇವೆ. ಬಿಜೆಪಿಯವರು ಎದುರಿಸಲಿ ಎಂದು ಸವಾಲು ಹಾಕಿದರು.

ಬೆಳ್ಳುಬ್ಬಿ ಅವರು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಆಪರೇಷನ್‌ ಕಮಲವಾದಾಗ ಸಚಿವ ಸ್ಥಾನವನ್ನೂ ಬಿಟ್ಟುಕೊಟ್ಟಿದ್ದರು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಟಿಕೆಟ್‌ ಸಿಗದ ಕಾರಣ ಜೆಡಿಎಸ್‌ ಸೇರ್ಪಡೆಯಾಗಿದ್ದು ಇದೀಗ ಬಾಗಲಕೋಟೆ ಲೋಕಸಭಾ ಚುನಾವಣೆಗೆ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.