ನವದೆಹಲಿ [ಜೂ.01]  "ಲೋಕಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಕೆಲಸಮಾಡಿ ಸೋಲುವಂತೆ ನೋಡಿಕೊಂಡವರ ವಿರುದ್ಧ ಹೈಕಮಾಂಡಿಗೆ ದೂರು ಸಲ್ಲಿಸಿದ್ದೇನೆ.  ಕೋಲಾರ ಕ್ಷೇತ್ರದಲ್ಲಿ  ನನ್ನನ್ನು ಸೋಲಿಸಲು ಪಿತೂರಿ ಮಾಡಿದರು ಯಾರು? ಯಾಕೆ ಮಾಡಿದರು?  ಪಕ್ಷದ ವರಿಷ್ಠರಿಗೆ ದೂರು ಕೊಟ್ಟಿದ್ದೇನೆ.  ಇದೊಂದು ಒಳಹಗರಣ. ಆಮೂಲಾಗ್ರವಾಗಿ ಪರಿಶೀಲಿಸಿ "ಅವರ" ವಿರುದ್ಧ ಕ್ರಮ ಕೈಗೊಳ್ಳುವುದು ಈಗ ಹೈಕಮಾಂಡಿಗೆ ಬಿಟ್ಟ ವಿಚಾರ".

ಮಲ್ಲಿಕಾರ್ಜುನ ಖರ್ಗೆ ಅವರಂತೆ ಸೋಲಿಲ್ಲದ ಸರದಾರರ ಸಾಲಿನಲ್ಲಿ ರಾರಾಜಿಸುತ್ತಿದ್ದ ಕೆ ಎಚ್ ಮುನಿಯಪ್ಪ ಸೋತುಹೋದ ಕಾಂಗೈನ ಹಿರಿಯ ರಾಜಕಾರಣಗಳಲ್ಲಿ ಒಬ್ಬರು. ಅವರು 1991 ರಿಂದ ಸತತವಾಗಿ ಏಳು ಬಾರಿ ಕೋಲಾರದಿಂದ ಗೆದ್ದು ಬರುತ್ತಿದ್ದ ಧೀರರು. ಆದರೆ ಮಾತ್ರ,  ಅವರ ಅಶ್ವಮೇಧಯಾಗಕ್ಕೆ ಬ್ರೇಕ್ ಹಾಕಿದವರು ಬಿಜೆಪಿಯ ಎಸ್ ಮುನಿಸ್ವಾಮಿ.  ಮುನಿಸ್ವಾಮಿ 70,7930 ಮತಗಳ ಅಂತರದಿಂದ ಜಯಸಾಧಿಸಿ ಕೆ ಎಚ್ ಮುನಿಯಪ್ಪ ಅವರಿಗೆ ಸೋಲಿನ ರುಚಿ ತೋರಿಸಿದರು.

ಚೆಲುವರಾಯ ಸ್ವಾಮಿಗೆ ಸುಮಲತಾ ಶುಭಾಶಯ! ಏನಿದು ವಿಷಯ?

ಶನಿವಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುನಿಯಪ್ಪ ಸೋಲಿಗೆ ಕಾರಣಗಳನ್ನು ಹುಡುಕುತ್ತಿದ್ದರು.  ತಾವೂ ಅಲ್ಲದೇ ಒಟ್ಟು 18 ಸ್ಥಾನಗಳನ್ನು ಗೆಲ್ಲಬೇಕಾಗಿದ್ದ ಕಾಂಗ್ರೆಸ್ ಕೇವಲ ಒಂದು ಸೀಟು ಗೆದ್ದುದ್ದಕ್ಕೆ ಹಲವು ರೀತಿಯ ಅನುಮಾನಗಳನ್ನು ವ್ಯಕ್ತಪಡಿಸಿದರು.

ಈ ಫಲಿತಾಂಶ ತಮಗೆ  ದಿಗ್ಭ್ರಮೆ ತಂದಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು ಅವರು.  ಸೋಲು-ಗೆಲುವು ಇದ್ದದ್ದೇ ಆದರೆ, 2-3 ಲಕ್ಷ ಗಳ ಅಂತರದ ಫಲಿತಾಂಶ ಅನೇಕ ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ತುರ್ತು ಪರಿಸ್ಥಿತಿಯ ನಂತರ ಇಂದಿರಾ ಗಾಂಧಿ ನೇತೃತ್ವದಲ್ಲಿ 350 ಸ್ಥಾನ, ರಾಜೀವ್ ಗಾಂಧಿ ಹತ್ಯೆಯ ನಂತರ ಕಾಂಗ್ರೆಸ್ 400 ಸೀಟ್ ಗೆದ್ದಿದ್ದನ್ನು ನೆನಪಿಸಿಕೊಂಡರು.

ಆದರೆ, ಯಾವುದೇ ಜನೋಪಯೋಗಿ ಕೆಲಸ ಮಾಡದ ಬಿಜೆಪಿ ಈ ಪಾಟಿ ಗೆದ್ದಿರುವುದಾದರೂ ಹೇಗೆ? ಈ ಫಲಿತಾಂಶ ಅನೇಕ ಸಂಶಯಗಳನ್ನು  ಹುಟ್ಟುಹಾಕಿರುವುದಂತೂ ಸತ್ಯ ಎಂದು ಮುನಿಯಪ್ಪ ಪ್ರತಿಪಾದಿಸಿದರು

ಇದೇ ವೇಳೆ, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿಯಾಗಿ ಸೋನಿಯಾ ಗಾಂಧಿ ಅವರು ಆಯ್ಕೆಯಾಗುವುದರೊಂದಿಗೆ ಹೊಸ ಅಧ್ಯಾಯ ಆರಂಭವಾಗಿದೆ ಎಂದೂ ಅವರು ಅಭಿಪ್ರಾಯಪಟ್ಟರು.  

ಸೋನಿಯಾ ಅಧ್ಯಕ್ಷ ಗಾದಿ ಏರಿದ ನಂತರ ಕಾರ್ಯಕರ್ತರಿಗೆ ಹೊಸ ಉತ್ಸಾಹ ಬಂದಿದೆ. ಭಾರತದ ಉದ್ದಗಲಕ್ಕೂ ಹೊಸ ಉತ್ಸಾಹ ತುಂಬಿಬಂದಿದೆ. ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಪಕ್ಷದ ಹೋರಾಟ ಮುಂದುವರಿಯಲಿದೆ. ಕಾಂಗ್ರೆಸ್ ಸಾಮಾಜಿಕ ನ್ಯಾಯಕ್ಕಾಗಿ ಸಂಸತ್ತಿನ ಒಳಗೆ ಮತ್ತು ಹೊರಗೆ ಹೋರಾಟ ಮಾಡಲಿದೆ ಎಂದೂ ಅವರು ಘೋಷಿಸಿದರು.

ಕಾಂಗ್ರೆಸ್ ಸೋಲಿಗೆ ಮುನಿಯಪ್ಪ ಇತರ ಕಾರಣಗಳನ್ನೂ ಕಂಡುಹಿಡಿದರು. ರಾಜ್ಯದಲ್ಲಿ ಜೆಡಿಎಸ್ - ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಆದರೆ ಕಾರ್ಯಕರ್ತರು, ಮತದಾರರು ಮೈತ್ರಿಯೊಂದಿಗೆ ಇರಲಿಲ್ಲ.  ಉಭಯ ಪಕ್ಷದ ಕಾರ್ಯಕರ್ತರು, ಮುಖಂಡರು ಒಂದಾಗದೆ ಇದ್ದದ್ದು ಸೋಲಿಗೆ ಕಾರಣವಾಗಿದೆ ಎಂದು ಖೇದ ವ್ಯಕ್ತಪಡಿಸಿದರು. ಸದ್ಯಕ್ಕೆ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಇರಲಿದೆ ಎಂದೂ ಹೈಕಮಾಂಡ್ ಆದೇಶಿಸಿರುವುದನ್ನು ಮುನಿಯಪ್ಪ ಸ್ಮರಿಸಿಕೊಂಡರು.