ಕಲಬುರಗಿ[ಮೇ.10]: ಹೈದ್ರಾಬಾದ್‌ ಕರ್ನಾಟಕದಲ್ಲಿ ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ್‌ ಖರ್ಗೆ ವಿರುದ್ಧ ಸ್ಪರ್ಧಿಸಿ ಗೆಲ್ಲುವ ಗಂಡು ಯಾರೂ ಇರಲಿಲ್ಲ. ಅವರ ವಿರುದ್ಧ ತೊಡೆ ತಟ್ಟಿಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಮೂಲಕ ಕುಸ್ತಿ ಹಿಡಿದ ಏಕೈಕ ವ್ಯಕ್ತಿಯೆಂದರೆ ಅದು ಬಂಜಾರ ಸಮುದಾಯದ ಹುಲಿ ಉಮೇಶ್‌ ಜಾಧವ್‌ ಎಂದು ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಶ್ಲಾಘಿಸಿದರು. ಇದೇ ವೇಳೆ ತಾವೂ ತೊಡೆ ತಟ್ಟಿಖರ್ಗೆ ವಿರುದ್ಧ ಕಿಡಿಕಾರಿದರು.

ಚಿಂಚೋಳಿ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಅವಿನಾಶ್‌ ಜಾಧವ್‌ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋಲಿನ ಭೀತಿ ಕಾಡುತ್ತಿದೆ, ಲೋಕಸಭೆ ಚುನಾವಣೆಯಲ್ಲಿ ಜಾಧವ್‌ ಬಹುಮತದಿಂದ ಆರಿಸಿ ಬರಲಿದ್ದಾರೆ. ದೊಡ್ಡ ಖರ್ಗೆ ಅವರ ರಾಜಕೀಯ ಅವನತಿ ಶುರುವಾಗಲಿದೆ. ಅದೇ ರೀತಿ ಚಿಂಚೋಳಿ ಉಪ ಚುನಾಣೆಯಲ್ಲೂ ಅವಿನಾಶ್‌ ಜಾಧವ್‌ 20 ಸಾವಿರ ಮತಗಳ ಅಂತರದಿಂದ ಜಯಭೇರಿ ಭಾರಿಸಲಿದ್ದಾರೆ. ಇನ್ನೇನು ರಾಜ್ಯದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವ ಕಾಲ ಸಮೀಪಿಸುತ್ತಿದೆ ಎಂದರು.

ಮೇ 23 ರ ನಂತರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸ್ಫೋಟ ಆಗುತ್ತದೆ, ಈಗ ಚಿಂಚೋಳಿಗೆ ಗೂಟದ ಕಾರುಗಳಲ್ಲಿ ಬಂದಿರುವವರೆಲ್ಲರೂ ಮಾಜಿಗಳಾಗುತ್ತಾರೆ. ಮೇ 23ರ ಬಳಿಕ ಕಾಂಗ್ರೆಸ್‌ ಮೂರು ಹೋಳಾಗುತ್ತದೆ ಎಂದು ಇದೇ ವೇಳೆ ಚಿಂಚನಸೂರ್‌ ಭವಿಷ್ಯ ನುಡಿದರು.