ಮಹಾಲಕ್ಷ್ಮೇ ಲೇ ಔಟ್‌ನಿಂದ ಸ್ಪರ್ಧೆಗೆ ಸೂಚನೆ ಇದೆ, ಒಪ್ಪಲ್ಲ| ನಮ್ಮೂರಲ್ಲೇ ನಾನು ಗೌಡ ಆಗಿರುತ್ತೇನೆ: ಬಾಲಕೃಷ್ಣ
ಬೆಂಗಳೂರು[ಸೆ.26]: ಮನೆ ಯಜಮಾನ ಆದವನು ಮನೆಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಆದರೆ ಮುಖ್ಯಮಂತ್ರಿಯಾಗಿದ್ದ ವೇಳೆ ಅಂತಹ ಕೆಲಸವನ್ನು ಎಚ್.ಡಿ. ಕುಮಾರಸ್ವಾಮಿ ಮಾಡಲಿಲ್ಲ. ಈಗ ಅದನ್ನು ಮಾಡಲಿಲ್ಲ, ಇದನ್ನು ಮಾಡಲಿಲ್ಲ ಎಂದು ಚರ್ಚಿಸುವುದು ಸರಿಯಲ್ಲ ಎಂದು ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.
ಉಪ ಚುನಾವಣೆಯಲ್ಲಿ ಮಹಾಲಕ್ಷ್ಮೇ ಲೇಔಟ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಆದರೆ ತಾವು ಮಾಗಡಿ ಬಿಟ್ಟು ಬೇರೆ ಕಡೆ ಸ್ಪರ್ಧಿಸುವುದಿಲ್ಲ. ಏನೇ ಮಾಡಿದರೂ ನನ್ನ ಕ್ಷೇತ್ರದಲ್ಲೇ ಮಾಡುತ್ತೇನೆ. ಹೈಕಮಾಂಡ್ ಒತ್ತಡ ಹಾಕಿದೆ ಎಂದ ಕ್ಷೇತ್ರ ಬಿಡುವುದಿಲ್ಲ. ನಮ್ಮೂರಲ್ಲೇ ನಾನು ಗೌಡ ಆಗಿರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ನಡುವೆ ನಡೆಯುತ್ತಿರುವ ‘ಹದ್ದು-ಗಿಣಿ’ ವಾಕ್ಸಮರದ ಬಗ್ಗೆ ಬುಧವಾರ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಎಚ್.ಡಿ. ಕುಮಾರಸ್ವಾಮಿ ಅವರು ತಮಗೆ ನೀಡಿದ ಅಧಿಕಾರವನ್ನು ಸರಿಯಾಗಿ ಬಳಸಿಕೊಂಡು ಐದು ವರ್ಷ ಆಡಳಿತ ನಡೆಸಬಹುದಿತ್ತು, ಆದರೆ ಅವರು ಆ ರೀತಿ ಮಾಡಲಿಲ್ಲ ಎಂದರು.
ಸಿದ್ದರಾಮಯ್ಯ ಬೆಂಬಲದಿಂದ ತಾವು ಮುಖ್ಯಮಂತ್ರಿಯಾಗಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ದೇವೇಗೌಡರ ಜೊತೆ ವಿರೋಧವಿದ್ದರೂ ಸಿದ್ದರಾಮಯ್ಯ ಅವರು ಹೈಕಮಾಂಡ್ ನಿರ್ಧಾರಕ್ಕೆ ಗೌರವ ಕೊಟ್ಟು ಮೈತ್ರಿ ಸರ್ಕಾರ ರಚಿಸಲು ಒಪ್ಪಿಕೊಂಡರು. ಇಲ್ಲಿ ಯಾರೂ ಹದ್ದು ಅಲ್ಲ, ಗಿಣಿಯೂ ಅಲ್ಲ. ಈ ಬಗ್ಗೆ ಚರ್ಚೆ ಸರಿಯಲ್ಲ. ಇಷ್ಟಕ್ಕೂ ಕೇವಲ ಕಾಂಗ್ರೆಸ್ ಶಾಸಕರು ಮಾತ್ರ ಹೊರಗೆ ಬಂದಿಲ್ಲ, ಜೆಡಿಎಸ್ ಶಾಸಕರು ಬಂದಿದ್ದಾರೆ. ಜೆಡಿಎಸ್ ಶಾಸಕರು ಹೊರ ಬಂದಿರುವ ಬಗ್ಗೆ ಯಾರು ಕಾರಣ, ಇದರ ಬಗ್ಗೆ ಯಾರು ಮಾತನಾಡುತ್ತಾರೆ ಎಂದು ಬಾಲಕೃಷ್ಣ ಪ್ರಶ್ನಿಸಿದರು.
